ಉದಯವಾಹಿನಿ, ಮೈಸೂರು: ಆನೆ ಎಂಬುದು ಒಂದು ದೊಡ್ಡ ಸಂದೇಶ ನೀಡುತ್ತದೆ. ಆನೆ ಎಂಬುದು ಕಾಡಿನ ಸಂಪತ್ತು. ವನ್ಯ ಜೀವಿಗಳು ಹಾಗೂ ವನ್ಯ ಸಂರಕ್ಷಣೆ ದೇಶಕ್ಕೆ ಅತ್ಯಗತ್ಯ. ಪರಿಸರ ಸಂರಕ್ಷಣೆ ಹಾಗೂ ವನ್ಯ ಸಂರಕ್ಷಣೆ ಮಾಡದಿದ್ದರೆ ಮಾನವ ಉಳಿಯುವುದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ವೀರನಹೊಸಹಳ್ಳಿಯಲ್ಲಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಕಾಡಿನಿಂದ ನಾಡಿಗೆ ಸ್ವಾಗತಿಸುವ ಗಜಪಯಣಕ್ಕೆ ಚಾಲನೆ ನೀಡಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷ ಮೈಸೂರಿನಲ್ಲಿ 40 ಡಿಗ್ರಿವರೆಗೆ ಉಷ್ಣಾಂಶ ಇತ್ತು. ಇದಕ್ಕೆ ಕಾರಣ ಪರಿಸರವನ್ನು ಹಾಳು ಮಾಡುತ್ತಿರುವುದು. ಆದ್ದರಿಂದ ಪರಿಸರವನ್ನು ರಕ್ಷಿಸಲು ಎಲ್ಲರೂ ಪಣತೊಡಬೇಕು ಎಂದು ತಿಳಿಸಿದರು.ಅರ್ಜುನ ಆನೆ 14 ಬಾರಿ ದಸರಾದಲ್ಲಿ ಭಾಗವಹಿಸಿ, 9 ಬಾರಿ ಅಂಬಾರಿ ಹೊತ್ತಿತ್ತು. ಆನೆಯೊಂದಿಗೆ ಕಾದಾಟದಲ್ಲಿ ವೀರ ಮರಣ ಹೊಂದಿತು. ಮಾನವ ಹಾಗೂ ಪ್ರಾಣಿ ಸಂಘರ್ಷ ನಡೆಯಲು ಕಾರಣ ಅರಣ್ಯ ನಾಶ ಮತ್ತು ಒತ್ತುವರಿ ಮಾಡುತ್ತಿರುವುದು ಇದನ್ನು ತಡೆಗಟ್ಟಬೇಕು ಎಂದರು.ಈ ಬಾರಿ ನಾಡಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಆದ್ದರಿಂದ ಮುಖ್ಯಮಂತ್ರಿ ಗಳು ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತಿಳಿಸಿದ್ದಾರೆ. ಅದರಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಕಿರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇಂದು ಗಜ ಪಯಣಕ್ಕೆ ಚಾಲನೆ ನೀಡಲಾಗಿದೆ. ಅರ್ಜುನ ಆನೆ ಪುಂಡಾನೆಯೊಂದಿಗೆ ಹೋರಾಡಿ ವೀರ ಮರಣ ಹೊಂದಿತು. ಇದಕ್ಕೆ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗವಹಿಸುತ್ತಿವೆ. ಇಂದು 9 ಆನೆಗಳನ್ನು ಬರಮಾಡಿಕೊಳ್ಳಲಾಗಿದೆ. 2ನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ.
ಮೈಸೂರಿನ ಅಂದಿನ ಮಹಾರಾಜರಾದ ಜಯ ಚಾಮರಾಜೇಂದ್ರ ಒಡೆಯರ್ ಹೆಚ್.ಡಿ.ಕೋಟೆಯ ಮಾಸ್ತಿ ಗುಡಿ ಬಳಿ ಆನೆಗಳಿಗೆ ಪೂಜೆ ಮಾಡಿ ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಈಗ ವೀರನ ಹೊಸಹಳ್ಳಿ ಬಳಿ ಚಾಲನೆ ನೀಡಲಾಗುತ್ತಿದೆ. ಅನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!