ಉದಯವಾಹಿನಿ, ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ರಸ್ತೆಗಳು ಸರಿಯಾದ ನಿರ್ವಹಣೆ ಇಲ್ಲದೇ ಮಳೆಗಾಲದಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಗ್ರಾಮೀಣ ರಸ್ತೆಗಳು ಗುಣಮಟ್ಟದ ಕಾಮಗಾರಿ ಇಲ್ಲದೇ ಸೊರಗಿವೆ.ತಾಲ್ಲೂಕಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಇವೆ. ಪಟ್ಟಣದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ಸಿಂಧನೂರು- ನರಗುಂದ-ಮುನವಳ್ಳಿ- ಹೆಮ್ಮಡಗಾ ರಸ್ತೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.
ಆದರೆ, ನಡು ನಡುವೆ ರೈತರು ತಮ್ಮ ಜಮೀನುಗಳಿಗೆ ಪೈಪು ಹಾಕಿಕೊಳ್ಳಲು ರಸ್ತೆ ಅಗೆದಿರುವುದು ಕಾಣಿಸುತ್ತದೆ. ತಗ್ಗನ್ನು ರೈತರಾಗಲಿ, ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯಾಗಲಿ ದುರಸ್ತಿ ಮಾಡದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ: ತಾಲ್ಲೂಕಿನ ಕೊಣ್ಣೂರಿನಿಂದ ಕಲಕೇರಿ, ಅಮರಗೋಳ ಕ್ರಾಸ್‌ವರೆಗೆ 218 ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಇದೇ ಮಾರ್ಗದ ಮೂಲಕ ಹುಬ್ಬಳ್ಳಿ ವಿಜಯಪುರ ನಗರಗಳಿಗೆ ತೆರಳಬೇಕು. ಕೊಣ್ಣೂರ ಬಳಿ ಇನ್ನೂ ಕಿರು ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಅದರೆ, ಮುಖ್ಯವಾಗಿ ಕೊಣ್ಣೂರ ಹಳೆ ಬಸ್ ನಿಲ್ದಾಣದದಿಂದ ಜನತಾ ಪ್ಲಾಟ್‌ವರೆಗೂ ಸುಮಾರು 3 ಕಿ.ಮೀ. ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ಮಳೆಗಾಲದಲ್ಲಿ ಕೆಸರಿನ ಹೊಂಡವಾದರೆ; ಉಳಿದ ಸಮಯದಲ್ಲಿ ಧೂಳಿನ ದರ್ಶನವಾಗುತ್ತದೆ. ಇದರಿಂದ ಪ್ರಯಾಣಿಕರ ಜತೆಗೆ ಇಲ್ಲಿಯ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ಹೆದ್ದಾರಿ ಅಲ್ಲಲ್ಲಿ ಕಿತ್ತು ಹೋಗಿರುವ ಪರಿಣಾಮ ನಿರ್ವಹಣೆ ಇಲ್ಲದೇ ಇದು ರಾಷ್ಟ್ರೀಯ ಹೆದ್ದಾರಿಯೇ ಎಂದು ಪ್ರಶ್ನಿಸುವಂತಾಗಿದೆ. ಇದಕ್ಕೆ ರಸ್ತೆ ನಿರ್ವಹಣೆ ಕಂಪೆನಿ ಸರಿಯಾಗಿ ನಿರ್ವಹಿಸದಿರುವುದು ಅವ್ಯವಸ್ಥೆಗೆ ಕಾರಣವಾಗಿದೆ.

ಗ್ರಾಮೀಣ ರಸ್ತೆಗಳ ಅವ್ಯವಸ್ಥೆ: ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ.ಪಾಟೀಲ ಹೆಚ್ಚಿನ ಅನುದಾನ ತಂದು ತಾಲ್ಲೂಕಿನ ಬಹುತೇಕ ಎಲ್ಲ ರಸ್ತೆಗಳು ನಿರ್ಮಾಣಗೊಳ್ಳಲು ಕಾರಣರಾಗಿದ್ದಾರೆ. ಆದರೆ, ಕೆಲವು ಕಾರಣಗಳಿಂದ ಅಲ್ಲಲ್ಲಿ ರಸ್ತೆಗಳು ನಿರ್ಮಾಣಗೊಳ್ಳುವುದು ಬಾಕಿ ಉಳಿದಿದೆ.
ಹದಲಿಯಿಂದ ಸುರಕೋಡ ಪ್ರವೇಶದ ಕಿರು ಸೇತುವೆಯವರೆಗೂ ರಸ್ತೆಯಾಗಿದೆ. ಉಳಿದ ಮೂರು ನೂರು ಮೀಟರ್ ರಸ್ತೆ ನಿರ್ಮಾಣವಾಗದ ಪರಿಣಾಮ ಹದಲಿಗೆ ತೆರಳಲು, ಸುರಕೋಡಕ್ಕೆ ಬರಲು ತೀವ್ರ ತೊಂದರೆ ಪಡಬೇಕಿದೆ. ಮಳೆಗಾಲದಲ್ಲಂತೂ ಈ ರಸ್ತೆ ದಾಟಲು ಸಾಕಷ್ಟು ತೊಂದರೆ ಎದುರಾಗುತ್ತದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ತಾತ್ಕಾಲಿಕವಾಗಿಯಾದರೂ ಈ ರಸ್ತೆ ಸುಧಾರಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!