ಉದಯವಾಹಿನಿ, ಬೆಂಗಳೂರು: ನಟ ದರ್ಶನ್ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿ ದಂತೆ ಹಲವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಹಿನ್ನಲೆಯಲ್ಲಿ ಜೈಲಿನ ಸಮಗ್ರ ಸುಧಾರಣೆಗೆ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವುದಾಗಿ ಗೃಹಸಚಿವ ಪರಮೇಶ್ವರ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡುಮೂರು ದಿನಗಳ ಒಳಗಾಗಿ ಈ ಕುರಿತು ಸಮಿತಿಯೊಂದನ್ನು ಪ್ರಕಟಿಸಲಾಗುವುದು. ಜೊತೆಗೆ ಈ ಹಿಂದೆ ಸಚಿವ ಎಚ್.ಕೆ.ಪಾಟೀಲ್ ಅವರ ಸಮಿತಿ ಜೈಲಿನ ಸುಧಾರಣೆಗೆ ನೀಡಿದ್ದ ವರದಿಯನ್ನು ಪರಿಗಣಿಸಲಾಗುವುದು.ಈವರೆಗೂ ಅದು ತಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದರು. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಹಾಗೂ ಇತರ ಕೈದಿಗಳನ್ನು ಒಂದು ಬ್ಯಾರೆಕ್ನಿಂದ ಮತ್ತೊಂದು ಬ್ಯಾರೆಕ್ಗೆ ಸುಲಭವಾಗಿ ತಿರುಗಾಡಲು ಅವಕಾಶ ಮಾಡಿಕೊಟ್ಟಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಇದು ಒಂದು ಜೈಲಿನ ವಿಚಾರವಲ್ಲ. ಬೆಳಗಾವಿ ಹಿಂಡಲಗ ಸೇರಿದಂತೆ ರಾಜ್ಯಾದ್ಯಂತ ಜೈಲುಗಳಲ್ಲಿ ಲೋಪಗಳು ಕಂಡುಬಂದಿವೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ, ದರ್ಶನ್ ಗುಂಪಿಗೆ ಸಹಾಯ ಮಾಡಿದವರ ವಿರುದ್ಧ ತನಿಖೆ ನಡೆಸಲಾಗುವುದು. ಈಗಾಗಲೇ 9 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದರು.ಜೈಲಿನ ಸುಧಾರಣೆಗೆ ರಾಷ್ಟ್ರ ಮಟ್ಟದಲ್ಲೂ ಮನಮೋಹನ್ ಸಿಂಗ್ ಕಾಲದಲ್ಲಿ ವರದಿಯೊಂದು ಮಂಡನೆಯಾಗಿರುವ ಬಗ್ಗೆ ಮಾಹಿತಿ ಇದೆ. ಅದನ್ನು ಪರಿಶೀಲಿಸಲಾಗುವುದು. ದರ್ಶನ್ ವಿಚಾರ ಒಂದೇ ಅಲ್ಲ ಒಟ್ಟಾರೆ ಜೈಲಿನ ವ್ಯವಸ್ಥೆಗಳನ್ನೇ ಪುನರ್ ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
