ಉದಯವಾಹಿನಿ, ಬೆಂಗಳೂರು: ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಸೀಸನ್ ೩ರ ಟ್ರೋಫಿಯನ್ನು ಬೆಂಗಳೂರಿನ ಮಲ್ಲೇಶ್ವರ ಶಾಸಕ ಡಾ.ಸಿ.ಎನ್ ಅಶ್ವತ್ಥನಾರಾಯಣ ಅನಾವರಣಗೊಳಿಸಿದರು.
ನಗರದ ಮತ್ತಿಕೆರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ.ಎನ್.ಅಶ್ವಥ್ ನಾರಾಯಣ್ ಹಾಗೂ ಖ್ಯಾತ ಸಿನಿಮಾ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ವರ್ಷದ ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ (ಕೆಡಬ್ಲ್ಯೂಪಿಎಲ್) ಹಿಂದಿನ ಎರಡು ಸೀಸನ್‌ಗಳಿಗಿಂತ ಗ್ರ್ಯಾಂಡ್ ಆಗಿರಲಿದೆ. ಈ ಸೀಸನ್‌ನಲ್ಲಿ ಸ್ಥಳೀಯ ಪ್ರತಿಭೆಗಳು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದರು.
ಟ್ರೋಫಿಯನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಟಗಾರರಿಗೆ ಕ್ರೀಡೆಯಲ್ಲಿ ಮಾತ್ರವಲ್ಲದೆ ಅವರ ಜೀವನದಲ್ಲೂ ನಿಜವಾದ ಚಾಂಪಿಯನ್ ಆಗಲು ಈ ವೇದಿಕೆ ತುಂಬ ಮಹತ್ವದ್ದು, ವಿಜಯ ರಾಘವೇಂದ್ರ ಅವರು ನಾನು ಇಂದು ಮಾತ್ರವಲ್ಲದೆ ಲೀಗ್ ಪಂದ್ಯಾವಳಿಯ ಸಮಯದಲ್ಲಿಯೂ ಇರುತ್ತೇನೆ. ಎಲ್ಲರ ಜತೆಗಿದ್ದು, ಪಂದ್ಯಾವಳಿ ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸದಸ್ಯ ಶ್ರೀ ಶಿವ ಪ್ರಸಾದ್, ಈ ವರ್ಷ ಕೆಡಬ್ಲ್ಯೂಪಿಎಲ್ ಸೀಸನ್-೩ ಐಪಿಎಲ್‌ನಂತಹ ವೃತ್ತಿಪರ ಕ್ರಿಕೆಟ್ ಲೀಗ್‌ಗಳಂತೆ, ಕೆಡಬ್ಲ್ಯೂಪಿಎಲ್ ಸೀಸನ್ ೩ರಲ್ಲಿಯೂ ಆಟಗಾರರ ಹರಾಜು ನಡೆಯಲಿದೆ. ಯಶಸ್ವಿ ಟಿ೨೦ ಸ್ವರೂಪವನ್ನು ಅಳವಡಿಸಿಕೊಂಡು ಕ್ರೀಡಾ ಪ್ರೇಮಿಗಳನ್ನು ಸೆಳೆಯಲಿದ್ದೇವೆ ಎಂದು ಹೇಳಿದರು.
ಕೆಡಬ್ಲ್ಯೂಪಿಎಲ್ ವೀಲ್‌ಚೇರ್ ಕ್ರಿಕೆಟ್ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ವಿಕಲಾಂಗ ಅಥ್ಲೀಟ್‌ಗಳ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಈ ಪಂದ್ಯಾವಳಿಯು ಅಂಗವಿಕಲರು (ಪಿಡಬ್ಲ್ಯೂಡಿ) ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ರೀಡೆ ಮತ್ತು ಸಮಾಜದಲ್ಲಿ ಅವರ ಸೇರ್ಪಡೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.
