ಉದಯವಾಹಿನಿ, ಬೆಂಗಳೂರು: ‘ಕ್ಯಾಂಪಸ್ ಫ್ರಂಟ್, ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಮೇಲಿದ್ದ ಕೇಸು ರದ್ದು ಮಾಡುವ ನೀವು ನಮ್ಮ ಶಾಸಕರ ಮೇಲೆ ಯಾಕೆ ಎಫ್‍ಐಆರ್ ದಾಖಲಿಸಿದ್ದೀರಿ? ಎಂಥ ಸರಕಾರ ನಿಮ್ಮದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಕ್ರೋಶ ಹೊರಹಾಕಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಡಾ. ಅಶ್ವತ್ಥನಾರಾಯಣರ ವಿರುದ್ಧ ಎಫ್‍ಐಆರ್ ಮಾಡಿದ್ದನ್ನು ಆಕ್ಷೇಪಿಸಿದÀರು. ಯಾವ ಕಾರಣಕ್ಕೆ ಎಫ್‍ಐಆರ್ ಮಾಡಿದ್ದೀರಿ ಎಂದು ಮುಖ್ಯಮಂತ್ರಿಗಳನ್ನು ಮತ್ತು ಉಪ ಮುಖ್ಯಮಂತ್ರಿಗಳನ್ನು ಪ್ರಶ್ನಿಸುವುದಾಗಿ ತಿಳಿಸಿದರು.ನಿಮ್ಮದು ಪಿಎಫ್‍ಐ ಕಾರ್ಯಕರ್ತರನ್ನು ರಕ್ಷಿಸುವ ಸರಕಾರವೇ? ಕ್ಯಾಂಪಸ್ ಫ್ರಂಟ್, ನಕ್ಸಲೀಯರನ್ನು ರಕ್ಷಿಸುವ ಸರಕಾರವೇ? ಹರೀಶ್ ಪೂಂಜ, ಡಾ. ಅಶ್ವತ್ಥನಾರಾಯಣರವರು ಟಿಪ್ಪು ಸುಲ್ತಾನ್ ಜಯಂತಿ ಮಾಡಬಾರದು ಎಂದು ಹೇಳಿದ್ದು ತಪ್ಪೇ? ನಮ್ಮ ಹಿಂದೂ ಧರ್ಮವನ್ನು ನಾಶ ಮಾಡಿದ, ಸಾವಿರಾರು ದೇವಾಲಯ ಧ್ವಂಸ ಮಾಡಿದ, ಲಕ್ಷಾಂತರ ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್ ಧೋರಣೆಯನ್ನು ಅವರು ಖಂಡಿಸಿದ್ದು ತಪ್ಪೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
