ಉದಯವಾಹಿನಿ, ಬೆಂಗಳೂರು: ತಮ್ಮ ಮೇಲೆ ಈಗ ಎಫ್ ಐಆರ್ ದಾಖಲಿಸಿರುವುದರ ವಿರುದ್ಧ ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟ ನಡೆಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ ಗುರುವಾರ ಹೇಳಿದ್ದಾರೆ.ಪತ್ರಕರ್ತರ ಪ್ರಶ್ನೆಗೆ ವಿವರಣೆ ನೀಡಿದ ಅವರು, ಕಳೆದ ಫೆಬ್ರುವರಿಯಲ್ಲಿ ನೀಡಿದ್ದ ಹೇಳಿಕೆ ಸಂಬಂಧವಾಗಿ ನಾನು ಈಗಾಗಲೇ ಸದನದಲ್ಲೇ ಸ್ಪಷ್ಟನೆ ನೀಡಿದ್ದೇನೆ.ಈ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದೂ ಹೇಳಿದ್ದೇನೆ. ಇಷ್ಟಾದರೂ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನಾಲ್ಕು ತಿಂಗಳ ಹಿಂದಿನ ಹೇಳಿಕೆಯನ್ನು ನೆಪವಾಗಿಸಿಕೊಂಡು ಎಫ್ ಐಆರ್ ದಾಖಲಾಗುವಂತೆ ಮಾಡಿದೆ ಎಂದರು.ನನಗೇನೂ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ದ್ವೇಷವಿಲ್ಲ. ಅವರ ಬಗ್ಗೆ ಗೌರವವಿದೆ. ಆದರೆ, ಸೈದ್ಧಾಂತಿಕವಾಗಿ ನಮ್ಮ ಹಾಗೂ ಅವರ ಪಕ್ಷಗಳ ನಡುವೆ ವ್ಯತ್ಯಾಸಗಳಿವೆ. ಈ ಹಿನ್ನೆಲೆಯಲ್ಲಿ ನಾನು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿದ್ದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
