ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನ ಬದಲಾವಣೆಯಾಗುವುದು 100ಕ್ಕೆ ನೂರರಷ್ಟು ಬದಲಾವುದು ಖಚಿತ. ಹೀಗಾಗಿಯೇ ಅನೇಕ ಸಚಿವರು ಒಳಗೊಳಗೆ ಕುರ್ಚಿ ಮೇಲೆ ಟವಲ್ ಹಾಕಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ನಾವು ಹೇಳುವುದಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಹೇಳುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ನಿಶ್ಚಿತ ಎಂದು ಪುನರುಚ್ಚರಿಸಿದರು.
ಮುಖ್ಯಮಂತ್ರಿ ಕುರ್ಚಿ ಮೇಲೆ ಸಾಲು ಸಾಲು ನಾಯಕರು ಟವಲ್ ಹಾಕಿರುವುದನ್ನು ನೋಡುತ್ತಿದ್ದೇವೆ. ಎಂ.ಬಿ.ಪಾಟೀಲ್, ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಪ್ರಯತ್ನ ಮಾಡುತ್ತಿರುವ ವಿಚಾರ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಎಂ.ಬಿ.ಪಾಟೀಲ್, ನಾನು ಸೀನಿಯರ್ ಎಂದು ಹೇಳುತ್ತಾರೆ. ಜೊತೆಗೆ ಲಿಂಗಾಯತ ಪ್ರಭಾವಿ ನಾಯಕ ಎಂದು ಹೇಳಿಕೊಂಡಿದ್ದಾರೆ.
ಆರ್.ವಿ.ದೇಶಪಾಂಡೆ, ನಾನು ಅವಕಾಶ ಕೊಟ್ಟರೇ ಸಿಎಂ ಆಗುತ್ತೇನೆ ಎಂದರೆ, ಇತ್ತ ಜಾರಕಿಹೊಳಿ ಅಂತೂ ನೇರವಾಗಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಶಾಸಕರು ನನ್ನ ಜೊತೆಗೆ ಎಷ್ಟು ಮಂದಿ ಇದ್ದಾರೆ? ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ. ದೆಹಲಿ ಮಟ್ಟದಲ್ಲೂ ಪ್ರಯತ್ನ ಮುಂದುವರೆಸಿದ್ದಾರೆ.
