ಉದಯವಾಹಿನಿ, ಉಡುಪಿ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ನಗರದ ಹಳೆ ತಾಲ್ಲೂಕು ಕಚೇರಿ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಿದೆ.
ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಈ ಐತಿಹಾಸಿಕ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಹಲವು ದಿನಗಳಿಂದ ಕಟ್ಟಡ ತೆರವು ಕಾಮಗಾರಿ ನಡೆದಿದೆ.ಕಟ್ಟಡದ ಹಂಚು, ಮರದ ಹಲಗೆ, ಕಬ್ಬಿಣದ ಸಲಾಕೆಗಳನ್ನು ತೆರವುಗೊಳಿಸಿದ ಬಳಿಕ ಗೋಡೆಗಳನ್ನೂ ಇದೀಗ ಕೆಡವಲಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಸಬ್‌ಜೈಲ್ ಆಗಿದ್ದ ಈ ಕಟ್ಟಡವು ಐತಿಹಾಸಿಕ ಮಹತ್ವವನ್ನು ಪಡೆದಿತ್ತು. ಕಟ್ಟಡಕ್ಕೆ ಪಾರಂಪರಿಕ ಮಾನ್ಯತೆ ನೀಡಿ ಉಳಿಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬಂದಿತ್ತು. ಆದರೆ ಅದು ವಿಫಲವಾಗಿತ್ತು.1906ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರನ್ನು ಈ ಕಟ್ಟಡದ ಹಿಂಬದಿಯ ಜೈಲಿನಲ್ಲಿರಿಸಲಾಗಿತ್ತು. ನಗರದಲ್ಲಿ ಹೊಸ ಜೈಲು ನಿರ್ಮಾಣವಾಗುವವರೆಗೂ ಈ ಜೈಲಿನಲ್ಲಿ ಕೈದಿಗಳನ್ನು ಇಡಲಾಗಿತ್ತು.ಮದ್ರಾಸ್ ರೂಫಿಂಗ್ ವಿನ್ಯಾಸದಲ್ಲಿ ಕಟ್ಟಲಾಗಿದ್ದ ಈ ಕಟ್ಟಡವು ಬ್ರಿಟಿಷ್ ವಾಸ್ತು ಶಿಲ್ಪ ವೈಭವಕ್ಕೆ ಸಾಕ್ಷಿಯಾಗಿತ್ತು.
ಐತಿಹಾಸಿಕ ಕುರುಹಾದ ಜೈಲು:ಹಳೆ ತಾಲ್ಲೂಕು ಕಚೇರಿ ಕಟ್ಟಡ ಸಂಪೂರ್ಣವಾಗಿ ನೆಲಸಮವಾದರೂ ಅದರ ಹಿಂಭಾಗದಲ್ಲಿರುವ ಸೆಲ್‌ಗಳಿರುವ ಜೈಲು ಕಟ್ಟಡ ಇನ್ನೂ ಇತಿಹಾಸದ ಕುರುಹಾಗಿ ನೆಲೆ ನಿಂತಿದೆ.ಆದರೆ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡದ ಸುತ್ತಲೂ ಮರಗಳು ಬೆಳೆದಿವೆ. ಮರಗಳ ಬೇರುಗಳು ಕೈದಿಗಳನ್ನಿರಿಸುತ್ತಿದ್ದ ಸೆಲ್‌ಗಳ ಗೋಡೆಗಳನ್ನು ಆವರಿಸಿದೆ. ಈ ಕಟ್ಟಡದ ಮೊದಲ ಅಂತಸ್ತಿನಲ್ಲಿ 12 ಮತ್ತು ಕೆಳ ಅಂತಸ್ತಿನಲ್ಲಿ 12 ಸೆಲ್‌ಗಳಿವೆ.ಎರಡು ಅಂತಸ್ತಿನ ಈ ಜೈಲು ಕಟ್ಟಡದ ಮೊದಲ ಅಂತಸ್ತಿಗೆ ಹತ್ತಿ ಹೋಗುವ ಮೆಟ್ಟಿಲುಗಳ ಬಳಿಯೂ ಪೊದೆಗಳು ಬೆೆಳೆದಿವೆ. ತಾಲ್ಲೂಕು ಕಚೇರಿ ಕಟ್ಟಡದ ಅವಶೇಷಗಳು ಈ ಕಟ್ಟಡದ ಸುತ್ತಲೂ ಆವರಿಸಿಕೊಂಡಿದೆ.
