ಉದಯವಾಹಿನಿ, ಗದಗ: ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಚಿಷಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತೀಯ ಧರ್ಮ, ಪರಂಪರೆ ಕುರಿತು ತಮ್ಮ ವಿಚಾರ ಮಂಡಿಸಿದ ಸ್ಮರಣೆಗಾಗಿ ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ 21 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆ ಅನಾವರಣವಾಗಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಕಂಚಿನ ಪ್ರತಿಮೆ ಅನಾವರಣ ನೆರವೇರಿಸಲಿದ್ದು, ವಿಶ್ವವಿದ್ಯಾಲಯದಲ್ಲಿ ‘ವಿವೇಕ ಲೋಕ’ ಹೆಸರಿನಲ್ಲಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಅಧ್ಯಯನ, ಸಂಶೋಧನೆ ಸೇರಿ ವಿವಿಧ ಚಟುವಟಿಕೆ ನಡೆಯಲಿವೆ.
ಒಟ್ಟು 18.5 ಅಡಿ ಎತ್ತರದ ಪೆಡಸ್ಟಲ್ (ಪೀಠ) ಮೇಲೆ 21 ಅಡಿ ಎತ್ತರದ ಪ್ರತಿಮೆ ಅನಾವರಣವಾಗಲಿದೆ. ₹ 20 ಲಕ್ಷ ವೆಚ್ಚದಲ್ಲಿ ಕೋಲ್ಕತ್ತದ ರಾಮಕೃಷ್ಣ ವಿವೇಕಾನಂದ ಮಿಷನ್ ಈ ಪ್ರತಿಮೆ ಸಿದ್ಧಪಡಿಸಿ, ವಿಶ್ವವಿದ್ಯಾಲಯಕ್ಕೆ ಉಚಿತವಾಗಿ ನೀಡಿದೆ. ಇದರ ತೂಕ 4 ಟನ್. ಕೋಲ್ಕತ್ತದಿಂದ ಗದುಗಿಗೆ ಲಾರಿಯಲ್ಲಿ ಸಾಗಿಸಲು ನಾಲ್ಕು ದಿನ ಬೇಕಾದವು.
‘ಸ್ವಾಮಿ ವಿವೇಕಾನಂದರು ದೇಶದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಆದರ್ಶಪ್ರಾಯರು. ಮಹಾತ್ಮ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿ ಕಲ್ಪನೆ ಮೇಲೆ ಸ್ಥಾಪಿತ ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ವಿಚಾರಧಾರೆಗೆ ಆದ್ಯತೆ ನೀಡುವ ಉದ್ದೇಶವಿದೆ’ ಎಂದು ಪ್ರಭಾರ ಕುಲಪತಿ ಪ್ರೊ. ಎಸ್.ವಿ.ನಾಡಗೌಡರ ತಿಳಿಸಿದ್ದಾರೆ.
