ಉದಯವಾಹಿನಿ, ಬೆಂಗಳೂರು: ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷಗಳಿಗೆ ಸಿಎಂ ಎಂದು ಹೇಳಿದ್ದಕ್ಕೆ ಡಿ.ಕೆ.ಸುರೇಶ್ ಎಚ್ಚರಿಕೆ ನೀಡಿದ್ದರು ಎಂಬ ಸುದ್ದಿಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯ ನಂತರ ಹೊರನಡೆಯುತ್ತಿದ್ದಾಗ ಡಿ.ಕೆ. ಸುರೇಶ್ ಪ್ರೀತಿಯಿಂದಲೇ ಪಾಟೀಲರೆ ಎಂದು ಗಟ್ಟಿಯಾಗಿ ಕರೆದರು, ನಾನು ವಾಪಸ್ ಅವರ ಬಳಿ ಬಂದೆ, ಅವರು ಗಟ್ಟಿಯಾಗಿರಿ ಎಂದು ಹೇಳಿದರು, ನಾನು ಈಗ ಆಫೀಸ್ಗೆ ಹೋಗುತ್ತಿದ್ದೇನೆ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಬಂದೆ, ಇದನ್ನು ಬಿಟ್ಟು ನನಗೆ ವಾರ್ನಿಂಗ್ ಕೊಟ್ಟರು ಎನ್ನುವುದೆಲ್ಲಾ ಸುಳ್ಳು ಎಂದು ಹೇಳಿದರು. “ಡಿಕೆ ಸುರೇಶ್ ನನಗೆ ವಾರ್ನಿಂಗ್ ಕೊಟ್ಟಿಲ್ಲ ನಾನು ಕೂಡ ಅವರಿಗೆ ವಾರ್ನಿಂಗ್ ಕೊಟ್ಟಿಲ್ಲ, ನನಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರಿಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ” ಎಂದು ತಿಳಿಸಿದರು.
