ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ಗೆ ದಮು , ತಾಕತ್ತು ಇದ್ದರೆ ಮುಡಾ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಯನ್ನು ತಕ್ಷಣವೇ ಪಡೆದು ನೈತಿಕತೆ ಪ್ರದರ್ಶನ ಮಾಡಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.
ಮುಡಾ ಪ್ರಕರಣ ಸಂಬಂಧ ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಉಳಿಸಿಕೊಂಡಿದ್ದರೆ ಮೊದಲು ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲಿ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಜೊತೆ ರಾಜೀ ಮಾಡಿಕೊಂಡಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಎಸೆದರು.
ಹಿಂದೆ ನಮ ಪಕ್ಷದ ಹಿರಿಯರಾದ ಯಡಿಯೂರಪ್ಪನವರ ವಿರುದ್ಧ ಎಫ್‌ಐಆರ್ ದಾಖಲಾದಾಗ ಇದೇ ಸಿದ್ದರಾಮಯ್ಯ ಏನೇನು ಮಾತನಾಡಿದರು ಎಂಬುದನ್ನು ಒಂದು ಬಾರಿ ಆತಾವಲೋಕನ ಮಾಡಿಕೊಳ್ಳಲಿ. ಅಂದು ರಾಜೀನಾಮೆಗೆ ಒತ್ತಾಯಿಸಿದ್ದ ಇವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ಈಗ ಬೇರೆ ಆಯ್ಕೆಗಳೇ ಇಲ್ಲ. ಹೈಕೋರ್ಟ್ ಆದೇಶ ಬಂದಿದೆ. ಯಾವ ಸೆಕ್ಷನ್‌ನಡಿ ತನಿಖೆಯಾಗಬೇಕು ಎಂಬುದನ್ನೂ ಹೇಳಿದೆ. ಸೆಕ್ಷನ್ 420ರಡಿ ದೂರು ದಾಖಲಿಸಲಾಗಿದೆ. ಎಫ್‌ಐಆರ್ ಅಗಿದ್ಯಾ? ರಾಜೀನಾಮೆ ಕೊಡೋಕೆ ಎಂದು ಪ್ರಶ್ನಿಸುತ್ತಿದ್ದರು. ಇವತ್ತು ಎಫ್‌ಐಆರ್ ಆಗಲಿದೆ. ಇದಕ್ಕಿಂತ ಇನ್ನೇನು ಬೇಕು? ಎಂದು ಪ್ರಶ್ನಿಸಿದರು. ಹಿಂದೆ ಯಡಿಯೂರಪ್ಪ ಅವರು ಲೋಕಾಯುಕ್ತ ತನಿಖೆ ಆಗುವಾಗ ಯಾವ ಹೇಳಿಕೆ ಕೊಟ್ಟಿದ್ದೀರಿ? ಯಡಿಯೂರಪ್ಪ ಕೇಸ್ ಬೇರೆ, ನಮ ಕೇಸ್ ಬೇರೆ ಅಂತೀರಿ. ಈಶ್ವರಪ್ಪ ಕೇಸ್ ಆದಾಗ ಏನ್ ಹೇಳಿದ್ದೀರಿ? ತನಿಖೆ ಆಗಿತ್ತಾ? ಆಗ.. ಈಶ್ವರಪ್ಪ ರಾಜೀನಾಮೆಗೆ ಕುಸ್ತಿ ಮಾಡಿದ್ದೀರಿ. ಈಗ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಹಾಕಿದರು.
