ಉದಯವಾಹಿನಿ, ಕಲಬುರಗಿ: ಕೊಡಲಿಯಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಸೇಡಂ ತಾಲ್ಲೂಕಿನ ಬಟಗೇರಾ (ಬಿ) ಗ್ರಾಮದಲ್ಲಿ ನಡೆದಿದೆ.
ನಾಗಮ್ಮ (42) ಎಂಬುವವರ ಕೊಲೆಯಾಗಿದ್ದು, ಈ ಸಂಬಂಧ ಪತಿ ಶೇಖರ್ (45) ಅವರನ್ನು ಸೇಡಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇಬ್ಬರ ಮಧ್ಯೆ ಜಗಳವಾಗಿದ್ದರಿಂದ ಪತ್ನಿ ತವರು ಮನೆಗೆ ಹೋಗಿದ್ದಳು. ಮರಳಿ ಬಂದಿದ್ದಳು. ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಪತಿ ಕೋಪದಲ್ಲಿ ಕೊಡಲಿಯಿಂದ ಪತ್ನಿಯ ಕುತ್ತಿಗೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ನಾಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಿಪಿಐ ಮಹಾದೇವ ದಿಡ್ಡಿಮನಿ, ಪಿಎಸ್‍ಐ ಮಂಜುನಾಥ ರೆಡ್ಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
