ಉದಯವಾಹಿನಿ, ನವದೆಹಲಿ: ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ 2.78 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಕೇಂದ್ರ ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ದಕ್ಷಿಣ ಹೈ-ಸ್ಪೀಡ್ ತ್ರಿಕೋನ ಅಥವಾ ದಕ್ಷಿಣ ಹೈ-ಸ್ಪೀಡ್ ಡೈಮಂಡ್ ಅನ್ನು ರೂಪಿಸಲಿವೆ. ಇದು ದಕ್ಷಿಣ ಭಾರತದ 5 ರಾಜ್ಯಗಳಿಗೆ ದೊಡ್ಡ ವರದಾನವಾಗಲಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಹೈಸ್ಪೀಡ್ ರೈಲು ಚೆನ್ನೈ-ಬೆಂಗಳೂರು ಪ್ರಯಾಣದ ಸಮಯವನ್ನ ಕೇವಲ 1 ಗಂಟೆ 13 ನಿಮಿಷಗಳಿಗೆ ಇಳಿಸಲಿದೆ. ಬೆಂಗಳೂರು-ಹೈದರಾಬಾದ್ ಕೇವಲ ಎರಡು ಗಂಟೆಗಳ ಪ್ರಯಾಣವಾಗಿರುತ್ತದೆ. ಚೆನ್ನೈ-ಹೈದರಾಬಾದ್ 2 ಗಂಟೆ 55 ನಿಮಿಷಗಳ ಪ್ರಯಾಣವಾಗಿರುತ್ತದೆ ಎಂದು ಹೇಳಿದರು. ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಎಲ್ಲಾ ಪ್ರಮುಖ ಆರ್ಥಿಕ ನಗರಗಳಾಗಿವೆ. ಜೊತೆಗೆ ಐಟಿ ತಂತ್ರಜ್ಞಾನದ ಪ್ರಮುಖ ಕೇಂದ್ರಗಳಾಗಿವೆ. ಈ ಹೈ-ಸ್ಪೀಡ್ ರೈಲು ಮಾರ್ಗ ರಚಿಸುವುದರಿಂದ ದಕ್ಷಿಣ ಭಾರತದ ರಾಜ್ಯಗಳ ಬೆಳವಣಿಗೆಯ ವೇಗ ಇನ್ನಷ್ಟು ಹೆಚ್ಚಾಗುತ್ತದೆ. ಇದು ದೇಶಕ್ಕೆ ಒಳ್ಳೆಯದು ಮತ್ತು ದಕ್ಷಿಣ ಭಾರತದ ಎಲ್ಲಾ ನಿವಾಸಿಗಳಿಗೂ ಅನುಕೂಲ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
