ಉದಯವಾಹಿನಿ, ಬಾಳೆಹಣ್ಣು ಅತ್ಯಂತ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಸೇವಿಸುವುದರಿಂದ ತೂಕ ಹೆಚ್ಚಳ ಅಥವಾ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ನಿಜಕ್ಕೂ ಈ ಹಣ್ಣಿನಲ್ಲಿ ತೂಕ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಗುಣವಿದೆಯಾ ಎಂಬುದನ್ನು ನೋಡೋಣ.ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಅನೇಕರು ಬಾಳೆಹಣ್ಣಿನ ಸೇವನೆಯನ್ನು ತಪ್ಪಿಸುತ್ತಾರೆ. ಏಕೆಂದರೆ, ಇದು ಸಿಹಿಯಾಗಿದ್ದು, ಹೆಚ್ಚು ಕ್ಯಾಲೊರಿಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬಾಳೆಹಣ್ಣು ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಎಂದು ಪ್ರತಿದಿನ ಸೇವಿಸುತ್ತಾರೆ. ಈ ಎರಡೂ ಮಿಶ್ರ ಸಲಹೆಗಳಿಂದ ಕೂಡಿವೆ.
ವಾಸ್ತವದಲ್ಲಿ ಬಾಳೆಹಣ್ಣು ‘ಕೊಬ್ಬನ್ನು ಹೆಚ್ಚಿಸುವ’ ಅಥವಾ ‘ತೂಕ ಕಡಿಮೆ ಮಾಡುವ ಹಣ್ಣು ಅಲ್ಲ. ಇತರೆ ಆಹಾರಗಳಂತೆ ತೂಕದ ಮೇಲೆ ಇದರ ಪರಿಣಾಮವು ಈ ಹಣ್ಣಿನ ಸೇವನೆಯ ಆವರ್ತನ, ಆಹಾರದ ಗುಣಮಟ್ಟ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಅವಲಂಬಿಸಿದೆ.
ಬಾಳೆಹಣ್ಣಿನ ಪೌಷ್ಟಿಕಾಂಶ ಮೌಲ್ಯ ಮತ್ತು ಕ್ಯಾಲೊರಿ: ಒಂದು ಮಧ್ಯಮ ಗಾತ್ರದ ಬಾಳೆಹಣ್ಣು ಸುಮಾರು 90 ರಿಂದ 105 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಈ ಕ್ಯಾಲೊರಿ ಬಹುಪಾಲು ನೈಸರ್ಗಿಕ ಕಾರ್ಬೋಹೈಡ್ರೆಟ್‌ಗಳಿಂದ ಕೂಡಿರುತ್ತದೆ. ಇದರ ಜೊತೆಗೆ ಫೈಬರ್, ಪೊಟ್ಯಾಸಿಯಂ, ವಿಟಮಿನ್ ಬಿ6, ಮೆಗ್ನಿಸಿಯಮ್ ಮತ್ತು ಸ್ವಲ್ಪ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಬಾಳೆಹಣ್ಣು ನೈಸರ್ಗಿಕವಾಗಿ ಕೊಬ್ಬನ್ನು ಕಡಿಮೆ ಹೊಂದಿದ್ದು, ಕೊಲೆಸ್ಟ್ರಾಲ್ ಹೊಂದಿರುವುದಿಲ್ಲ. ಸಂಸ್ಕರಿತ ಆಹಾರಗಳಿಗಿಂತ ಭಿನ್ನವಾಗಿ, ಬಾಳೆಹಣ್ಣಿನಲ್ಲಿರುವ ಕ್ಯಾಲೊರಿಗಳು ಸ್ನಾಯುಗಳ ಆರೋಗ್ಯ, ಜೀರ್ಣಕ್ರಿಯೆ ಮತ್ತು ನರಗಳ ಆರೋಗ್ಯವನ್ನು ಬೆಂಬಲಿಸುವ ಪೋಷಕಾಂಶಗಳೊಂದಿಗೆ ಕೂಡಿರುತ್ತದೆ.
