ಉದಯವಾಹಿನಿ, ವಿಶ್ವಸಂಸ್ಥೆ: ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ವಿಶ್ವದಾದ್ಯಂತ ಭಯೋತ್ಪಾದಕ ಘಟನೆಗಳ ಮೇಲೆ ಪಾಕಿಸ್ತಾನದ ಕೈವಾಡವಿದೆ. ಭಾರತದ ವಿರುದ್ಧ ಭಯೋತ್ಪಾದನೆ ನಡೆಸಿದರೆ ಪರಿಣಾಮ ಎದುರಿಸುವುದು ಅನಿವಾರ್ಯವಾಗಲಿದೆ ಎಂದು ಭಾರತದ ಪ್ರತಿನಿಧಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. ಭಯೋತ್ಪಾದನೆ, ಮಾದಕ ದ್ರವ್ಯ ವ್ಯಾಪಾರ ಮತ್ತು ಅಂತಾರಾಷ್ಟ್ರೀಯ ಅಪರಾಧಗಳಿಗೆ ಪಾಕಿಸ್ತಾನ ಜಾಗತಿಕ ಖ್ಯಾತಿಯನ್ನು ಹೊಂದಿದೆ. ಮಿಲಿಟರಿ ಆಡಳಿತ ನಡೆಸುತ್ತಿರುವ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುವ ಧೈರ್ಯ ತೋರಿದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಹೇಳಿದ್ದಾರೆ. 2001ರ ಸಂಸತ್ ಮೇಲಿನ ದಾಳಿ, 26/11ರ ಮುಂಬೈ ಭಯೋತ್ಪಾದಕ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ದೃಢವಾಗಿದೆ. ನಮ್ಮ ಸಂಸತ್ತು, ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆ ಸ್ಥಳಗಳು ಮತ್ತು ತೀರ್ಥಯಾತ್ರೆಯ ಮಾರ್ಗಗಳ ಮೇಲೆ ಪಾಕ್ ದಾಳಿ ಮಾಡಿದೆ. ಅಂತಹ ದೇಶ ಈಗ ಹಿಂಸಾಚಾರದ ಬಗ್ಗೆ ಮಾತನಾಡುವುದು ಬೂಟಾಟಿಕೆಯಾಗಿದೆ ಎಂದಿದ್ದಾರೆ. ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಷರೀಫ್, ಭಾರತವು ಕಾಶ್ಮೀರದಲ್ಲಿ ಆರ್ಟಿಕಲ್ 370ರ ರದ್ದತಿಯನ್ನು ವಾಪಸ್ ಪಡೆಯಬೇಕು. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹಾರ ಮಾಡಿಕೊಳ್ಳಲು ಮಾತುಕತೆ ನಡೆಸಬೇಕು ಎಂದಿದ್ದರು. ಪಾಕಿಸ್ತಾನದ ಪ್ರಸ್ತಾಪಗಳನ್ನು ಭಾರತ ತಿರಸ್ಕರಿಸಿದೆ ಎಂದು ಅವರು ಆರೋಪಿಸಿದ್ದರು.
