ಉದಯವಾಹಿನಿ, ಉಡುಪಿ: ಗದ್ದೆ ಅಗೆದು ಹಾಕಿದಂತಹ ರಸ್ತೆ, ಕಾರಂಜಿಯಂತೆ ಚಿಮ್ಮುವ ಕೊಳಚೆ ನೀರು, ಮೂಗು ಮುಚ್ಚದಿದ್ದರೆ ಹೊಟ್ಟೆ ತೊಳಸುವಂತಹ ಗಬ್ಬು ವಾಸನೆ ಜೊತೆಗೆ ಕಚ್ಚಲು ಸನ್ನದ್ಧವಾಗಿರುವ ಬೀದಿ ನಾಯಿಗಳು ..ಇದು ಉಡುಪಿ ನಗರ ಸಭೆಯ 8ನೇ ನಿಟ್ಟೂರ್ ವಾರ್ಡ್‌ನ ದುಗ್ಗಣಬೆಟ್ಟು ಬಡಾವಣೆಯ ದುಸ್ಥಿತಿ.
ನಿವಾಸಿಗಳ ಪಾಡು ಹೇಳತೀರದು. ಕೊಳಚೆ ನೀರಿನ ದುರ್ವಾಸನೆಯಿಂದ ಊಟವೂ ಸೇರುವುದಿಲ್ಲ. ರಾತ್ರಿಯಾದರೆ ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.ದುರಸ್ತಿಗಾಗಿ ಸುಮಾರು ಐದು ತಿಂಗಳ ಹಿಂದೆ ಇಲ್ಲಿನ ಮುಖ್ಯರಸ್ತೆಯನ್ನು ಅಗೆದು ಹಾಕಲಾಗಿ ಆದರೆ ಇದುವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ. ಮಳೆ ಬಂತೆಂದರೆ ಈ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ವಾಹನ ಸಂಚಾರ ದುಸ್ತರವಾಗಿದೆ.ಮಳೆ ಇಲ್ಲದಿದ್ದರೂ ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವುದೇ ಸವಾಲಿನ ಕೆಲಸವಾಗಿದೆ.
ದುರಸ್ತಿಗಾಗಿ ರಸ್ತೆಯನ್ನು ಅಗೆಯುವ ವೇಳೆ ಚರಂಡಿಯನ್ನು ಅಧ್ವಾನ ಮಾಡಿ ಹಾಕಲಾಗಿದೆ. ಅಲ್ಲಿಂದ ಸಮಸ್ಯೆ ಆರಂಭವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.ಚರಂಡಿ ಸಮಸ್ಯೆಯನ್ನು ಹಲವು ಬಾರಿ ನಗರ ಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಅಳಲು ತೋಡಿಕೊಳ್ಳುತ್ತಾರೆ.ಒಳಚರಂಡಿ ಉಕ್ಕಿ ಹರಿಯುತ್ತಿರುವುರಿಂದ ಸುಮಾರು ಹತ್ತರಷ್ಟು ಮನೆಯವರಿಗೆ ತೊಂದರೆಯಾಗಿದೆ. ಸದಾ ಕಾಲ ಕೊಳಚೆ ನೀರು ಹರಿಯುತ್ತಿರುವುದರಿಂದ ಸಮೀಪದ ಬಾವಿಗಳ ನೀರು ಕೂಡ ಕಲುಷಿತಗೊಂಡು ಬಾವಿಗಳು ಉಪಯೋಗ ಶೂನ್ಯವಾಗಿವೆ.
