ಉದಯವಾಹಿನಿ, ಕೋಲಾರ: ‘ರಾಜ್ಯದ ಮಂತ್ರಿಯಾಗಿ ಹೇಳುತ್ತಿದ್ದು, ಐದು ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಮುಂದುವರಿಯುತ್ತದೆ. 2028ಕ್ಕೂ ಮತ್ತೆ ನಾವೇ ಅಧಿಕಾರಕ್ಕೆ ಬಂದು ಪುನಃ ಮುಂದುವರಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಶಕ್ತಿ ಯೋಜನೆ ಬಗ್ಗೆ ಮಹಿಳೆಯೊಬ್ಬರು ಮೇಲ್ ಮಾಡಿದ್ದ ವಿಚಾರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆಯೇ ಹೊರತು ಯಾವುದೇ ಗೊಂದಲ ಸೃಷ್ಟಿಸುವ ಪ್ರಮೇಯವಿಲ್ಲ. ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತುಸು ಗೊಂದಲಕ್ಕೊಳಗಾಗಿದ್ದರು. ಇದೀಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದು, ಎಲ್ಲವೂ ಬಗಹರಿದಿದೆ’ ಎಂದರು.

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‍ಡಿಎ ಅಭ್ಯಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯಿಸಿ, ‘ನಿಖಿಲ್ ಕಣ್ಣೀರು ಹಾಕಿದ್ದಾರೆ ಎಂದರೆ ಅದು ಒಂದು ಕಲೆ. ಕಣ್ಣೀರು ಹಾಕುವುದು ಸ್ವಲ್ಪ ಜನರಿಗೆ ಮಾತ್ರವೇ ಬರುತ್ತದೆ. ನಮಗೆ ಅಂತಹ ಕಲೆ ಗೊತ್ತಿಲ್ಲ, ಹೀಗಾಗಿ, ನಾನು ಕಣ್ಣೀರು ಹಾಕಿಲ್ಲ’ ಎಂದು ಹೇಳಿದರು.’ಚನ್ನಪಟ್ಟಣದಲ್ಲಿ ಯಾರು ಕೆಲಸ ಮಾಡಿದ್ದಾರೆ, ಯಾರನ್ನು ಗೆಲ್ಲಿಸಬೇಕು ಎನ್ನುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಸರ್ಕಾರವಿದ್ದು, ಕಾಂಗ್ರೆಸ್ ಶಾಸಕರೇ ಆಯ್ಕೆಯಾದರೆ ಅಭಿವೃದ್ಧಿಗೂ ಅನುಕೂಲ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಅಲೆ ಇದೆ’ ಎಂದು ತಿಳಿಸಿದರು.
ಕೆ.ಸಿ.ವ್ಯಾಲಿ ನೀರಿನಿಂದ ಬೆಳೆಗಳ ಮೇಲೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿ, ‘ಕೆ.ಸಿ.ವ್ಯಾಲಿಯಿಂದ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅತಿ ಆಳಕ್ಕೆ ಕೊಳವೆ ಬಾವಿ ಕೊರೆಯಬೇಕಿತ್ತು. ಈಗ 200-300 ಅಡಿಗೆ ನೀರು ಸಿಗುತ್ತಿದೆ. ಬೆಳೆಗಳ ಗುಣಮಟ್ಟ ಹಾಳಾಗಿರುವುದು ನೊಣಗಳು, ಬೇರೆಬೇರೆ ಕಾರಣಕ್ಕೆ ಇರಬಹುದು. ನಾನು ಸಚಿವನಾದ ಬಳಿಕ 3 ಬಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಮಣ್ಣಿನ ಫಲವತ್ತತೆ ಕಡಿಮೆಯಾಗಿರುವುದಕ್ಕೆ ಕೆ.ಸಿ.ವ್ಯಾಲಿ ನೀರು ಕಾರಣ ಎನ್ನುವುದು ಸರಿಯಲ್ಲ.

Leave a Reply

Your email address will not be published. Required fields are marked *

error: Content is protected !!