ಉದಯವಾಹಿನಿ, ಚಿಕ್ಕಮಗಳೂರು: ನಕ್ಸಲ್ ಮುಂಡಗಾರು ಲತಾ ಹಾಗೂ ಅವರ ಸಹಚರರು ಇತ್ತೀಚೆಗೆ ಬಂದು ಹೋಗಿದ್ದು ಅಪರಿಚಿತರ ಮನೆಗಲ್ಲ, ಅವರ ಅತ್ತೆ ಮನೆಗೆ. ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮಕ್ಕೂ, ಮುಂಡಗಾರು ಗ್ರಾಮಕ್ಕೂ ಅವಿನಾಭಾವ ಸಂಬಂಧ ಇದೆ.
ಈ ಎರಡೂ ಗ್ರಾಮಗಳು ಪರಸ್ಪರ ಹೆಣ್ಣು- ಗಂಡಿನ ಸಂಬಂಧ ಮಾಡಿಕೊಂಡಿವೆ.
ಹಾಗಾಗಿ, ಸಂಬಂಧಿಕರೇ ಹೆಚ್ಚು. ಮುಂಡಗಾರು ಹಾಗೂ ಕಡೇಗುಂದಿ ಗ್ರಾಮಗಳ ನಡು ವಿನ ಕಾಡಿನ ದಾರಿಯ ಅಂತರ ಕೇವಲ 3-4 ಕಿಲೋ ಮೀಟರ್. ಆದರೆ, ಮುಂಡಗಾರು ಗ್ರಾಮಕ್ಕೆ ಹೋಗಬೇಕಾದರೆ ಕೆರೆಕಟ್ಟೆ ಮಾರ್ಗದಲ್ಲಿ ಹೋಗಬೇಕು. ಕಡೇಗುಂದಿ ಗ್ರಾಮಕ್ಕೆ ಹೋಗಬೇಕಾದರೆ ಜಯಪುರ, ಮೇಗೂರಿನಿಂದ ಹೋಗಬೇಕು. ಆದರೆ, ಈ ಎರಡೂ ಗ್ರಾಮಕ್ಕೆ ಕಾಡು ದಾರಿಯೇ ಹತ್ತಿರ. ಗೊತ್ತಿದ್ದವರು ಮಾತ್ರ ಈ ರಸ್ತೆಯಲ್ಲಿ ಓಡಾಡುತ್ತಾರೆ. ಹೆಚ್ಚಿನ ಮಂದಿ ಜಯಪುರ ಹಾಗೂ ಕೆರೆಕಟ್ಟೆ ಮಾರ್ಗದಲ್ಲಿ ಬಂದು ಹೋಗುತ್ತಾರೆ.
ಕಡೇಗುಂದಿ ಹಾಗೂ ಮುಂಡಗಾರು ಗ್ರಾಮಗಳ ಜನರು ಹಬ್ಬ ಹರಿದಿನಗಳು ಮಾತ್ರವಲ್ಲ, ಆಗಾಗ ಬಂದು ಹೋಗುವುದು 3 ರೂಢಿಯಾಗಿದೆ. ಹಾಗೆಯೇ ಮುಂಡಗಾರು ಲತಾ ಬಂದು ಹೋಗುವುದಕ್ಕೆ ಇಲ್ಲಿನ ಜನ ವಿಶೇಷ ಅಂದುಕೊಳ್ಳುವುದಿಲ್ಲ.
ನ.10ರಂದು ಮುಂಡಗಾರು ಹಾಗೂ ಅವರ ಸಹಚರರು ಕಡೇಗುಂದಿ ಗ್ರಾಮಕ್ಕೆ ಬಂದಿದ್ದರು. ಅಂದು ರಾತ್ರಿ ಸುಬ್ಬೇಗೌಡರ (ಮುಂಡಗಾರು ಲತಾ ಅವರ ಅತ್ತೆ ಮನೆ) ಮನೆಯಲ್ಲಿ ಊಟ ಮಾಡಿದ್ದಾರೆ. ಹಲವು ವರ್ಷಗಳ ನಂತರ ಬಂದಿರುವ ಸಂಬಂಧಿಕರ ಹುಡುಗಿಗೆ ಊಟ ಹಾಕೋದಿಲ್ಲ ಹೋಗು ಎಂದು ಯಾರೂ ಕೂಡ ಹೇಳುವುದಿಲ್ಲ. ಹಾಗಾಗಿ, ಅವರಿಗೆ ಊಟ ಕೊಟ್ಟಿರಬಹುದೆಂದು ಹೇಳಲಾಗುತ್ತಿದೆ.
ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು ರಾತ್ರಿ 11 ಗಂಟೆ ವೇಳೆಗೆ. ಜಯಪುರದಲ್ಲಿ ಕ್ಯಾಂಪ್ ಮಾಡಿರುವ ಎಎನ್‌ಎಎಫ್ ಹಾಗೂ ಸ್ಥಳೀಯ ಪೊಲೀಸರು ಕಡೇಗುಂದಿ ಗ್ರಾಮಕ್ಕೆ ಹೋಗುವಷ್ಟರಲ್ಲಿ ನಕ್ಸಲೀಯರು ಸ್ಥಳದಿಂದ ತೆರಳಿದ್ದರು. ಮುಂಡಗಾರು ಲತಾ ತನ್ನ ಸಂಬಂಧಿಕರ ಮನೆಗೆ ಬಂದು ಹೋಗಿರುವುದು ದೃಢಪಟ್ಟಿದೆ. ಈ ಸಂಬಂಧ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!