ಉದಯವಾಹಿನಿ, ಅಬುಜಾ: ಪ್ರಧಾನಿ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ನೈಜೀರಿಯಾದ (Nigeria) ರಾಜಧಾನಿ ಅಬುಜಾವನ್ನು ತಲುಪಿದ್ದಾರೆ. ಅಲ್ಲಿದ್ದ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಭಾರತೀಯ ಸಮುದಾಯದ ಜನರು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿದ್ದರು.
ಇದರೊಂದಿಗೆ ಮೋದಿ-ಮೋದಿ ಘೋಷಣೆಗಳನ್ನು ಕೂಗಿದರು.
ನೈಜೀರಿಯಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ (GCON) ಪ್ರಶಸ್ತಿಯನ್ನು ನೀಡಲಿದೆ. ಈ ಪ್ರಶಸ್ತಿಯನ್ನು 1969ರಲ್ಲಿ ರಾಣಿ ಎಲಿಜಬೆತ್ ಅವರಿಗೆ ನೀಡಲಾಗಿತ್ತು. ನಂತರ ಪ್ರಧಾನಿ ಮೋದಿ ಅವರು ಈ ಗೌರವವನ್ನು ಪಡೆದ ಎರಡನೇ ವಿದೇಶಿ ಗಣ್ಯರಾಗಿದ್ದಾರೆ. ಪ್ರಧಾನಿ ಮೋದಿಯವರಿಗೆ ವಿದೇಶಿ ರಾಷ್ಟ್ರವೊಂದು ನೀಡಿರುವ 17ನೇ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ. ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಪ್ರಧಾನಿ ತಮ್ಮ ಮೂರು ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿ ಭಾನುವಾರ ನೈಜೀರಿಯಾಕ್ಕೆ ಆಗಮಿಸಿದರು. 17 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.
