ಉದಯವಾಹಿನಿ, ಬೆಂಗಳೂರು: ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ 4 ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿಯ ಕೃಷಿ ಮೇಳಕ್ಕೆ 34.13 ಲಕ್ಷ ಜನರು ಭೇಟಿ ನೀಡಿದ್ದು, ರೂ.6.17 ಕೋಟಿ ವಹಿವಾಟು ನಡೆದಿದೆ ಹಾಗೂ 53 ಸಾವಿರ ಮಂದಿ ಮಧ್ಯಾಹ್ನದ ಭೋಜನ ಸವಿದಿದ್ದಾರೆ.
ಕೃಷಿ ಮೇಳದಲ್ಲಿ ಹನಿ ನೀರಾವರಿ ವ್ಯವಸ್ಥೆ, ಕತ್ತೆ ಹಾಲು ಆಧಾರಿತ ಸಾಬೂನುಗಳು ಮತ್ತು ಕ್ರೀಮ್‌ಗಳು, ತೆಂಗಿನಕಾಯಿ ಸುಲಿಯುವ ಸ್ಟ್ಯಾಂಡ್, ಚಾಲಕ ರಹಿತ ಟ್ರ್ಯಾಕ್ಟರ್‌ಗಳು ಹಲವರ ಗಮನ ಸೆಳೆಯಿತು. ಅಲ್ಲದೆ, ಮೇಳದಲ್ಲಿ ನಾವೀನ್ಯತೆಯು ಕೃಷಿಯನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ತಿಳಿಸಿಕೊಡಲಾಯಿತು.
ಕೊನೆಯ ದಿನ‌ ವಾರಾಂತ್ಯದ ರಜೆ ಕಾರಣ, ನಗರ ವಾಸಿಗಳು ಕುಟುಂಬ ಸಮೇತ ಮೇಳಕ್ಕೆ ಭೇಟಿ ನೀಡಿದ್ದರು. ಕೃಷಿ ಮೇಳದಲ್ಲಿದ್ದ ಮಳಿಗೆಗಳಲ್ಲಿ ಜನ ಜಾತ್ರೆಯೇ ಕಂಡು ಬಂದಿತ್ತು. ಅಲ್ಲದೆ, ಆಹಾರ ಮಳಿಗೆಗಳಲ್ಲೂ ಸಾಕಷ್ಟು ಜನರು ಸೇರಿದ್ದರು.
ಬೂಮ್ ಸ್ಪ್ರೇಯರ್‌ಗಳು ಮತ್ತು ಸ್ವಯಂಚಾಲಿತ ಪಕ್ಷಿ ಮತ್ತು ಮಂಕಿ ಸ್ಕೇರ್‌ಗಳಂತಹ ತಂತ್ರಗಳತ್ತ ಸಾಕಷ್ಟು ಜನರು ಆಕರ್ಷಿತರಾದರು. ಅಲ್ಲದೆ, 80 ಅಡಿಗಳವರೆಗೆ ತಲುವ ಸಾಮರ್ಥ್ಯವಿರುವ ತೆಂಗಿನಕಾಯಿ ಸುಲಿಯುವ ಸ್ಟ್ಯಾಂಡ್ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ಇದಲ್ಲದೆ, ಪರಿಸರ ಸ್ನೇಹಿ ತೆಂಗಿನಕಾಯಿ ತಟ್ಟೆಗಳನ್ನು ಉತ್ಪಾದಿಸುವ ತಂತ್ರ ಕೂಡ ಜನರ ಗಮನ ಸೆಳೆಯಿತು.
ಇದಲ್ಲದೆ, ಮಣ್ಣು ಮತ್ತು ಹವಾಮಾನದ ನಿರ್ದಿಷ್ಟ ಮಾಹಿತಿ ಒದಗಿಸಿ, ಉತ್ತಮ ಗುಣಮಟ್ಟದ ಫಸಲಿನೊಂದಿಗೆ ಹೆಚ್ಚಿನ ಇಳುವರಿ ಪಡೆಯಲು ಸಹಾಯ ಮಾಡುವ ತಂತ್ರಜ್ಞಾನ ಆಧಾರಿತ ‘ಫೈಲೋ’ ಸಾಧನ ಕೂಡ ರೈತರ ಗಮನ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!