ಉದಯವಾಹಿನಿ, ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನದ ದೋಣಿ ವಿಹಾರ ಕೇಂದ್ರದಲ್ಲಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳಿಂದ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ.
ದೋಣಿ ವಿಹಾರ ನಡೆಯುವ ನೀರಿನ ಕೃತಕ ಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಕಿರು ಸೇತುವೆಯಲ್ಲಿ ಬಿರುಕುಗಳು ಉಂಟಾಗಿದ್ದು ನೀರು ಯಥೇಚ್ಛವಾಗಿ ಸೋರಿಕೆಯಾಗುತ್ತಿದೆ.
ದೋಣಿ ವಿಹಾರಕ್ಕೆ ಅಗತ್ಯ ಇರುವಷ್ಟು ನೀರು ನಿಲ್ಲುತ್ತಿಲ್ಲ. ಹಾಗಾಗಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆಯೂ ನೀರಿನ ಸೋರಿಕೆ ಕಾರಣದಿಂದ ದೋಣಿ ವಿಹಾರವನ್ನು ನಿಲ್ಲಿಸಲಾಗಿತ್ತು. ಜಲಾಶಯದ ಒಳ ಹರಿವು ಹೆಚ್ಚು ಇದ್ದಾಗ ದೋಣಿ ವಿಹಾರ ಕೇಂದ್ರದ ತೊಟ್ಟಿಗೆ ಹೆಚ್ಚಿನ ನೀರು ಹರಿಸಿ ದೋಣಿಗಳನ್ನು ನಡೆಸಲಾಗುತ್ತಿತ್ತು. ಆದರೆ ನಿರಂತರವಾಗಿ ಅಣೆಕಟ್ಟೆಯಿಂದ ಈ ಕೆರೆಗೆ ನೀರು ಹರಿಸಲು ಸಾಧ್ಯವಿಲ್ಲ. ನೀರೆಲ್ಲ ಸೋರಿ ಹೋಗುತ್ತಿದ್ದು, ಸೋರಿಕೆ ತಡೆಗಟ್ಟುವವರೆಗೆ ದೋಣಿ ವಿಹಾರ ಪುನರಾರಂಭಿಸಲು ಸಾಧ್ಯವಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ. ದೋಣಿ ವಿಹಾರ ಕೇಂದ್ರವನ್ನು ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ತಲಾ ₹50 ಶುಲ್ಕ ನಿಗದಿ ಮಾಡಲಾಗಿದೆ. ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿ ದೋಣಿ ವಿಹಾರ ಮಾಡುತ್ತಿದ್ದರು. ಸದ್ಯ ದೋಣಿ ವಿಹಾರ ಸ್ಥಗಿತಗೊಂಡಿರುವುದರಿಂದ ಇಲಾಖೆಗೆ ನಷ್ಟ ಉಂಟಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!