
ಉದಯವಾಹಿನಿ, ಚಿಕ್ಕಮಗಳೂರು: ಕಾಡಾನೆ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಾನವ ಸಾವಿನ ಜತೆಗೆ ಆನೆಗಳ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲೇ ಐದು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ಮೃತಪಟ್ಟಿವೆ. ಆರು ವರ್ಷಗಳ ಅವಧಿಯಲ್ಲಿ 15 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಹುಲಿ ಸಂರಕ್ಷಿತ ಭದ್ರಾ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಒಳಗೊಂಡಿರುವ ಸಮೃದ್ಧವಾದ ಅರಣ್ಯವನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು. ಇಲ್ಲಿ ಸಹಜವಾಗಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ನಡೆಯುತ್ತಿದೆ.
ಕಾಡಿನಲ್ಲಿ ಜನವಸತಿ, ಹೋಮ್‌ಸ್ಟೇಗಳು, ಕಾಫಿತೋಟಗಳು ಆವರಿಸಿಕೊಳ್ಳುತ್ತಿದ್ದರೆ, ಕಾಡಿನಿಂದ ನಾಡಿನತ್ತ ಆನೆಗಳು ಬಂದು ಉಪಟಳ ನೀಡುತ್ತಿವೆ. ಅನೇಕ ವರ್ಷಗಳಿಂದ ಇರುವ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರ್ಕಾರ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಆನೆ ಮತ್ತು ಮಾನವ ಪ್ರಾಣ ಹಾನಿ ನಿರಂತರವಾಗಿ ನಡೆಯುತ್ತಿದೆ. ಆರು ವರ್ಷಗಳಲ್ಲಿ 15 ಜನ ಪ್ರಾಣ ಕಳೆದುಕೊಂಡಿದ್ದರೆ, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನು ಜಾನುವಾರುಗಳ ಸಾವು ಕೂಡ ಲೆಕ್ಕಕ್ಕಿಲ್ಲದಷ್ಟು ನಡೆದಿದೆ. ಕಾಡಂಚಿನ ಪ್ರದೇಶಗಳಲ್ಲಿ ಇದ್ದ ಸಂಘರ್ಷ ಈಗ ಇನ್ನಷ್ಟು ಹೆಚ್ಚಾಗಿದೆ. ಕಳೆದ ವರ್ಷ ಚಿಕ್ಕಮಗಳೂರು ನಗರಕ್ಕೆ ಆನೆಗಳು ಬಂದು ಅಡ್ಡಾಡಿರುವುದು ಆತಂಕ ಹೆಚ್ಚಿಸಿತ್ತು. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿಯಲ್ಲೇ ಆನೆ ಆಡ್ಡಾಡಿರುವುದು ವಾಹನ ಸವಾರರಲ್ಲಿ ಭಯ ಹುಟ್ಟಿಸಿತ್ತು.
2023ರ ಸೆಪ್ಟೆಂಬರ್ ಈವರೆಗೆ ಐದು ಜನರ ಪ್ರಾಣ ಹಾನಿಯಾಗಿದೆ. ಕಣಿವೆ ಪ್ರದೇಶ ಆಗಿರುವುದರಿಂದ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದು ಕೂಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಸವಾಲಿನ ಕೆಲಸ. ಇದರಿಂದಾಗಿಯೇ ಕಾರ್ಯಾಚರಣೆ ವೇಳೆಯೇ ಕಾಡಾನೆಯೊಂದು ಮೃತಪಟ್ಟಿತು.
ಮಾನವ- ಕಾಡಾನೆ ಸಂಘರ್ಷ ಕಡಿಮೆ ಮಾಡಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣವನ್ನು ಭದ್ರಾ ವನ್ಯಜೀವಿ ವಲಯದಲ್ಲಿ ಒಟ್ಟು 40 ಕಿಲೋ ಮೀಟರ್‌ಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಲಕ್ಕವಳ್ಳಿ ಭಾಗದಲ್ಲಿ 1.215 ಕಿಲೋ ಮೀಟರ್ ಉದ್ದದ ಬ್ಯಾರಿಕೇಡ್ ಈಗಾಗಲೇ ನಿರ್ಮಾಣವಾಗಿದೆ
