ಉದಯವಾಹಿನಿ, ಕೋಲಾರ: ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಕುರಿತು ರೈತರಿಗೆ ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ “ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ” ಜಾಗೃತಿ ಜಾಥಾ ನಗರದಲ್ಲಿ ನಡೆಯಿತು.

ನಗರದ ಜೂನಿಯರ್ ಕಾಲೇಜು ಆವರಣದಿಂದ ಆರಂಭವಾದ ನಡಿಗೆ ಬಂಗಾರಪೇಟೆ ವೃತ್ತ ಮಾರ್ಗವಾಗಿ ಪರಿವೀಕ್ಷಣ ಮಂದಿರ ತಲುಪಿತು.
ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಅಕ್ರಂಪಾಷ ಹಸಿರು ನಿಶಾನೆ ತೋರುವ ಹಾಗೂ ಗಾಳಿ ಬುರುಡೆಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಸಿರಿಧಾನ್ಯದ ಮಹತ್ವ ಅರಿವು ಹೆಚ್ಚಾಗುತ್ತಿದೆ. ಭಾರತ ಸಿರಿಧಾನ್ಯಗಳ ತವರೂರಾಗಿದೆ. ಜಗತ್ತಿನಲ್ಲಿ ಬೆಳೆಯುವ ಸಿರಿಧಾನ್ಯಗಳ ಪೈಕಿ ಶೇ.೪೨ ರಷ್ಟು ಸಿರಿಧಾನ್ಯವನ್ನು ನಮ್ಮ ದೇಶದಲ್ಲೇ ಬೆಳೆಯಲಾಗುತ್ತಿದ್ದು, ಸಿರಿಧಾನ್ಯ ಬೆಳೆಯುವಲ್ಲಿ ನಮ್ಮ ರಾಜ್ಯ ಮುಂದಿದೆ ಎಂದರು.ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯ ಅತ್ಯುತ್ತಮ ಔಷಧಿ, ಬಹಳ ಕಡಿಮೆ ನೀರಿನಲ್ಲೂ ಸಿರಿಧಾನ್ಯ ಬೆಳೆಯಬಹುದಾಗಿದೆ. ರೋಗಮುಕ್ತ ಜೀವನಕ್ಕಾಗಿ ಎಲ್ಲರೂ ಸಿರಿ ಧಾನ್ಯಗಳ ಬಳಕೆಗೆ ಮುಂದಾಗಬೇಕು, ಸಿರಿಧಾನ್ಯಗಳು ಭೂಮಿಗೂ ವರದಾನ, ಆರೋಗ್ಯಕ್ಕೂ ವರದಾನ ಎಂದು ಹೇಳಿದರು.
ಅತ್ಯಧಿಕ ನಾರಿನ ಅಂಶ ಸೇರಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸತ್ವಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು, ಪಿಸ್ತಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಜೀವನಶೈಲಿ ಆಧಾರಿತ ಕೆಲವು ರೋಗಗಳಿಗೂ ಇದು ಉತ್ತಮ ಮದ್ದಾಗಿದೆ. ಆಹಾರದಲ್ಲಿ ಹೆಚ್ಚಾಗಿ ಸಿರಿಧಾನ್ಯ ಬಳಸಬೇಕು. ಈ ಧಾನ್ಯವನ್ನು ಜನಪ್ರಿಯಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ನಮ್ಮ ರೈತರು ಸಾವಯವ ಹಾಗೂ ಮಿಶ್ರ ಬೇಸಾಯ ಪದ್ಧತಿ ರೂಢಿಸಿಕೊಂಡು ಸಿರಿಧಾನ್ಯವನ್ನು ಹೆಚ್ಚು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *

error: Content is protected !!