ಉದಯವಾಹಿನಿ, ತೆಲಂಗಾಣ: ಕರ್ನಾಟಕದ ಬಳಿಕ ಇದೀಗ ತೆಲಂಗಾಣ ಕೂಡ ದ್ವೇಷ ಭಾಷಣದ ವಿರುದ್ಧ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ. ಈ ಕುರಿತು ಶನಿವಾರ ಕ್ರಿಸ್‌ಮಸ್ ಆಚರಣೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ , ಶೀಘ್ರದಲ್ಲೇ ತೆಲಂಗಾಣದಲ್ಲಿ ದ್ವೇಷ ಭಾಷಣದ ವಿರುದ್ಧ ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಆಡಳಿತ ರಾಜ್ಯವಾದ ಕರ್ನಾಟಕದಲ್ಲಿ ದೇಶದಲ್ಲೇ ಮೊದಲ ಬಾರಿಗೆ ದ್ವೇಷ ಭಾಷಣ ವಿರೋಧಿ ಕಾನೂನನ್ನು ಗುರುವಾರ ಅಂಗೀಕರಿಸಲಾಯಿತು. ಇದು ಈಗ ರಾಜ್ಯದಲ್ಲಿ ಕಾನೂನು ರೂಪದಲ್ಲಿ ಜಾರಿಗೆ ಬಂದಿದೆ.
ಹೈದರಾಬಾದ್‌ನಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಕ್ರಿಸ್‌ಮಸ್ ಸಂಭ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಶೀಘ್ರದಲ್ಲೇ ವಿಧಾನಸಭೆಯಲ್ಲಿ ದ್ವೇಷ ಭಾಷಣದ ಕುರಿತು ಶಾಸನವನ್ನು ತರಲು ಮಸೂದೆಯನ್ನು ಮಂಡಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆಯನ್ನು ಗುರುವಾರ ಜಾರಿಗೆ ತಂದಿತ್ತು. ಇದನ್ನು ಸಚಿವ ಸಂಪುಟದಲ್ಲಿ ಡಿಸೆಂಬರ್ 4 ರಂದು ಅಂಗೀಕರಿಸಲಾಗಿತ್ತು. ಡಿಸೆಂಬರ್ 18ರಂದು ಸದನದಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಕಾನೂನಿನಡಿಯಲ್ಲಿ ದ್ವೇಷ ಭಾಷಣ ಮಾಡಿದವರ ವಿರುದ್ಧ 1 ಲಕ್ಷ ರೂ. ವರೆಗೆ ದಂಡ ಮತ್ತು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಇದೇ ರೀತಿಯ ಮಸೂದೆಯನ್ನು ಈಗ ತೆಲಂಗಾಣ ರಾಜ್ಯದಲ್ಲೂ ಜಾರಿಗೆ ತರಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತು ಮುಖ್ಯಮಂತ್ರಿಯವರು ಈಗಾಗಲೇ ಘೋಷಣೆಯನ್ನು ಕೂಡ ಮಾಡಿದರು.
