ಉದಯವಾಹಿನಿ, ಕಾಶ್ಮೀರ: ಇಬ್ಬರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿನ ಮನೆಯೊಂದರಿಂದ ಆಹಾರವನ್ನು ದೋಚಿಕೊಂಡು ಹೋದ ಘಟನೆ ನಡೆದಿದೆ. ಇದರ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಉಧಂಪುರದ ಚೋರ್ ಮೋಟು ಗ್ರಾಮದ ಮಂಗ್ತು ರಾಮ್ ಎಂಬವರ ಮನೆಗೆ ಇಬ್ಬರು ಅಪರಿಚಿತರು ಬಂದು ಆಹಾರವನ್ನು ದೋಚಿಕೊಂಡು ಹೋಗಿದ್ದಾರೆ ಎನ್ನುವ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಉಧಂಪುರ ಜಿಲ್ಲೆಯ ಗ್ರಾಮವೊಂದಕ್ಕೆ ಶನಿವಾರಸಂಜೆ ಬಂದಿದ್ದ ಭಯೋತ್ಪಾದಕರು ಮನೆಯಿಂದ ಆಹಾರವನ್ನು ದೋಚಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ಬಳಿಕ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ತಿಳಿಸಿದ್ದಾರೆ. ಈ ಹಿಂದೆ ನಡೆದಿರುವ ಎನ್‌ಕೌಂಟರ್ ಪ್ರದೇಶದಿಂದ ಸುಮಾರು 5 ಕಿ.ಮೀ. ಪಶ್ಚಿಮದಲ್ಲಿರುವ ಮಜಲ್ಟಾ ಪ್ರದೇಶದ ಚೋರ್ ಮೋಟು ಮತ್ತು ಅದರ ಪಕ್ಕದ ಅರಣ್ಯ ಗ್ರಾಮಗಳಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದರು.ಚೋರ್ ಮೋಟು ಗ್ರಾಮದ ಮಂಗ್ತು ರಾಮ್ ಎಂಬವರ ಮನೆಗೆ ಅವರ ಮನೆಗೆ ಶನಿವಾರ ಸಂಜೆ 6.30 ರ ಸುಮಾರಿಗೆ ಇಬ್ಬರು ಅಪರಿಚಿತ ಭಯೋತ್ಪಾದಕರು ಬಂದಿದ್ದು, ಆಹಾರ ದೋಚಿಕೊಂಡು ಹೋಗಿದ್ದರು. ಈ ಕುರಿತು ಶನಿವಾರ ತಡರಾತ್ರಿ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಸಿದ್ದಗೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು ಎಂದು ತಿಳಿಸಿದರು. ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಭಾನುವಾರ ಬೆಳಗಿನ ಜಾವದವರೆಗೆ ವಿವಿಧ ಕಡೆಗಳಿಂದ ಏಕಕಾಲದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಲಾಯಿತು. ಆದರೆ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!