ಉದಯವಾಹಿನಿ,ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ 123 ಸೀಟು ಗೆಲ್ಲದೆ ಇದ್ದರೆ ನಮ್ಮ ಜೆಡಿಎಸ್ ಪಕ್ಷವನ್ನು ವಿಸರ್ಜಿಸುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದರು. ಆದ್ರೇ ಈಗ ಯೂಟರ್ನ್ ಹೊಡೆದಿರುವಂತ ಅವರು ಹೇಳಿದ್ದೇನು ಈ ಬಗ್ಗೆ ಇಂದು ಸರಣಿ ಟ್ವಿಟ್ ಮಾಡಿರುವಂತ HDK, ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡ ಭಾವಿಸಿದ್ದೆ. ನಾನು ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್ ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಅನ್ನುವ ಕನಿಷ್ಠ ಅರಿವು ಅವರಿಗೆ ಇದ್ದಂತೆ ಇಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ ಎಂದಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರು ಯಾವಾಗ ವಿಸರ್ಜನೆ ಮಾಡುತ್ತಾರೆ? ಪಕ್ಷಕ್ಕೆ ಯಾವಾಗ ಅಂತಿಮ ಸಂಸ್ಕಾರ ಮಾಡುತ್ತಾರೆ? ಎಂದು ಕೆಲ ಅರೆಬೆಂದ ಸಚಿವರು, ಶಾಸಕರು ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.ಅವರೆಲ್ಲರ ಅಜ್ಞಾನಕ್ಕೆ ನನ್ನ ಪ್ರಗಾಢ ಸಾಂತ್ವನವಿದೆ. ಅವರ ಕನ್ನಡ ಭಾಷಾಜ್ಞಾನದ ಬಗ್ಗೆ ಕಾಳಜಿ ಇದೆ. ಆ ಮಹಾಶಯರು ನನ್ನ ಹೇಳಿಕೆಗಳನ್ನೊಮ್ಮೆ ತಿಳಿಯಲಿ. ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ. ಕನ್ನಡ ಓದಲು ಬಾರದಿದ್ದರೆ ನನ್ನ ಬಳಿ ಬರಲಿ, ಮನದಟ್ಟು ಆಗುವ ರೀತಿ ಹೇಳುತ್ತೇನೆ. ಕನ್ನಡವನ್ನೂ ಕಲಿಸುತ್ತೇನೆ ಎಂದು ತಿಳಿಸಿದ್ದಾರೆ.
