ಉದಯವಾಹಿನಿ, ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಯ ದಿನವೇ ವಿವಾದಕ್ಕೀಡಾಗಿದೆ. ಫಿಲ್ಮ್ ಫೆಸ್ಟಿವಲ್‍ನ ರಾಯಭಾರಿಯೂ ಆಗಿರುವ ನಟ ಪ್ರಕಾಶ್ ರಾಜ್ ವೇದಿಕೆಯಲ್ಲಿ ಮಾತಾಡುತ್ತಾ, ಕೇಂದ್ರ ಸರ್ಕಾರ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕೊಟ್ಟಿಲ್ಲ. ಕರ್ನಾಟಕ ಸರ್ಕಾರ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನ ಮಾಡಬೇಕು ಎಂದಿದ್ದಾರೆ.
ಇತ್ತೀಚೆಗೆ ಕೇರಳ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅಲ್ಲಿನ ಸರ್ಕಾರ ನಿಂತು ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿತ್ತು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನವಾಗುವಂತೆ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕಾಶ್ ರಾಜ್ ಮಾತಿಗೆ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಸಚಿವ ಸಂತೋಷ್ ಲಾಡ್ ಬೆಂಬಲ ಕೊಟ್ಟಿದ್ದಾರೆ. ಆದರೆ, ಪ್ರಕಾಶ್‍ರಾಜ್ ಮಾತಿಗೆ ಬಿಜೆಪಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಭರತ್‍ಶೆಟ್ಟಿ ಕಿಡಿಕಾರಿದ್ದಾರೆ. ಪ್ಯಾಲೆಸ್ತೀನ್ ಸಿನಿಮಾಗಳು ದೇಶದ ಸ್ವಾಸ್ತ್ಯವನ್ನ ಹಾಳುಮಾಡುವ ಅಂಶಗಳನ್ನ ಒಳಗೊಂಡ ಸಿನಿಮಾಗಳಾದ ಕಾರಣ ಅವಕಾಶ ನೀಡಬಾರದು ಎಂದಿದ್ದಾರೆ.
ಶಾಸಕ ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿ, ನಮ್ಮ ದೇಶದ ರಾಜಕೀಯದ ಬಗ್ಗೆ ಕಲಾವಿದರು ಮಾತಾಡ್ತಿಲ್ಲ. ಎಲ್ಲರ ಧ್ವನಿ ಹೋಗಿದೆ, ಕೆಲವರು ಮಾತ್ರ ಮಾತಾಡ್ತಾ ಇದ್ದಾರೆ. ಅದರಲ್ಲಿ ಪ್ರಕಾಶ್ ರಾಜ್ ಒಬ್ಬರು. ಇಡೀ ದೇಶದಲ್ಲಿ ಅಂತ ರಾಜಕೀಯಕ್ಕೆ ವಿರೋಧ ಮಾಡ್ತಿರೋರ ಪೈಕಿ ಸಿದ್ದರಾಮಯ್ಯ ಒಬ್ಬರು. ಸಿದ್ದರಾಮಯ್ಯ ಅವರು ಸಿದ್ದಾಂತ ಇಟ್ಟುಕೊಂಡು ಕೆಲಸ ಮಾಡ್ತಾ ಇದ್ದಾರೆ. ಪ್ಯಾಲೆಸ್ತೀನ್ ಸಿನಿಮಾ ಇರಲಿ ನಮ್ಮ ವೇದಿಕೆ ಮೇಲೆ ಪ್ರದರ್ಶನ ಮಾಡ್ತೀವಿ ಎಂದಿದ್ದಾರೆ. ಸಚಿವ ಸಂತೋಷ್ ಲಾಡ್ ಈ ಬಗ್ಗೆ ಮಾತನಾಡಿ, ಪ್ರಕಾಶ್ ರಾಜ್ ಮಾತನ್ನು ಒಪ್ಪಬೇಕಾಗುತ್ತದೆ, ಪ್ಯಾಲೆಸ್ತೀನ್ ಸಿನಿಮಾ ಸ್ಕ್ರೀನಿಂಗ್ ಆಗಬೇಕು. ವಾಜಪೇಯಿ ಸಾಹೇಬ್ರು ಸದನದಲ್ಲಿ , ಒಮ್ಮೆ ಪ್ಯಾಲೆಸ್ತೀನ್ ಬಗ್ಗೆ ಮಾತನಾಡಿದ್ದರು. ಅದರಿಂದ ಬೇರೆ ಏನು ಸಮಸ್ಯೆ ಆಗಲ್ಲ. ಏಕೆಂದ್ರೆ ಅಲ್ಲಿನ ಜನರ ಕಷ್ಟ ತಿಳಿಯುತ್ತದೆ. ನಟ ಪ್ರಕಾಶ್ ರಾಜ್ ಅವರು ಹೇಳಿದ್ದು ಸರಿ ಇದೆ ಎಂದಿದ್ದಾರೆ.
