ಉದಯವಾಹಿನಿ , ಮುಂಬೈ: ಫಲಿತಾಂಶ ಹೊರಬಿದ್ದು 13 ದಿನಗಳ ಬಳಿಕ ಮಹಾ ರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಕೊನೆಗೂ ಸುಖಾಂತ್ಯ ಕಂಡಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನಾವೀಸ್ ಆಯ್ಕೆಯಾಗಿದ್ದು, ಅವರೇ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವ ನಾಯಕ ದೇವೇಂದ್ರ ಫಡ್ನಾವೀಸ್ ನೂತನ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಜೊತೆಗೆ ಮಾಜಿ ಮುಖ್ಯಮಂತ್ರಿ ಶಿವಸೇನೆಯ ಮುಖಂಡ ಏಕ್ ನಾಥ್ ಶಿಂಧೆ ಹಾಗೂ ಎನ್ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕಾರ ಮಾಡುವರು. ಅಧಿಕಾರ ಹಂಚಿಕೆ ಮುಗಿದ ಬಳಿಕ ಸಚಿವ ಸಂಪುಟ ಮುಂದಿನ ವಾರದಲ್ಲಿ ನಡೆಯಲಿದೆ.
ಮುಂಬೈನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಫಡ್ನಾವೀಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ವಿಜಯ್ ರೂಪಾನಿ ಅನುಮೋದಿಸಿದ್ದಾರೆ. ಇಂದು ಸಂಜೆ ಮಹಾಯುತಿಯ ನಾಯಕರು ರಾಜ್ಯಪಾಲ ಸಿ.ಕೆ .ರಾಧಕೃಷ್ಣನ್ ಅವರನ್ನು ಭೇಟಿಯಾಗಿ ಸರ್ಕಾರದ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ.
