ಉದಯವಾಹಿನಿ, ನವದೆಹಲಿ: ಚೆನ್ನೈ-ಬೆಂಗಳೂರು ಮತ್ತು ಹೈದ್ರಾಬಾದ್ -ಬೆಂಗಳೂರು ಕೈಗಾರಿಕಾ ಕಾರಿಡಾರ್ ಎರಡನ್ನೂ ಒಟ್ಟುಗೂಡಿಸಿ ಹಾಸನದಿಂದ ಮಂಗಳೂರಿಗೆ ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರಿಡಾರ್ ನಿರ್ಮಾಣವಾದರೆ ಬ್ಯುಸಿನೆಸ್ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾದಾಗ ಚೆನ್ನೈ-ಬೆಂಗಳೂರು ಕಾರಿಡಾರ್ ಘೋಷಣೆಯಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಈಗ ಚಂದ್ರಬಾಬು ನಾಯ್ಡು ಅವರು ಹೈದ್ರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡಿದ್ದಾರೆ.
ಈ ಎರಡೂ ಕಾರಿಡಾರ್‌ಗಳನ್ನು ಒಟ್ಟುಗೂಡಿಸಿ ಹಾಸನ, ಮಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಿದರೆ ಆ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಹಾಸನ ವಿಮಾನನಿಲ್ದಾಣವನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಹಾಗೂ ವಾಣಿಜ್ಯಾಭಿವೃದ್ಧಿ ಕೂಡ ಆಗಲಿದೆ. ಹಾಸನದಲ್ಲಿ ವಿಮಾನನಿಲ್ದಾಣಕ್ಕೆ 1,200 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲಾಗಿತ್ತು. ಐವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಒಂದೊಂದು ಕಾಲದಲ್ಲಿ ಒಂದೊಂದು ರೀತಿ ಆಗಿದೆ. ಆದರೂ ವಿಮಾನನಿಲ್ದಾಣ ನಿರ್ಮಾಣ ವಿಳಂಬವಾಗುತ್ತಿದೆ. ಈಗ ವಿಮಾನನಿಲ್ದಾಣವನ್ನು ಅಭಿವೃದ್ಧಿಪಡಿಸಿದರೆ ವಾಣಿಜ್ಯ ಅಭಿವೃದ್ಧಿ ಜೊತೆಗೆ ರೈತರ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗಲಿದೆ. ಹೀಗಾಗಿ ರಫ್ತಿಗೂ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.
