ಉದಯವಾಹಿನಿ, ಬೆಂಗಳೂರು : ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್ ಪಕ್ಷದ ಚೌಕಟ್ಟು ಮೀರಿ ವರ್ತಿಸದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಇತ್ತೀಚಿನ ವಿದ್ಯಮಾನಗಳ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೋರ್ ಕಮಿಟಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಆರ್.ಅಶೋಕ್ ಸೇರಿದಂತೆ ಪ್ರಮುಖರ ಜೊತೆ ಸಭೆ ನಡೆಸಿದರು.
ಇತ್ತೀಚೆಗೆ ಕರ್ನಾಟಕದ ಬಿಜೆಪಿಯೊಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಎಲ್ಲೇ ಹೋದರೂ ಇಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಸರ್ಕಾರದ ವಿರುದ್ದ ಸದನದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಲು ಸಾಕಷ್ಟು ಅಸ್ತ್ರಗಳಿವೆ. ಆದೆ ನಮೊಳಗಿನ ಕಚ್ಚಾಟದಿಂದ ಆಡಳಿತ ಪಕ್ಷಕ್ಕೆ ನಾವೇ ಅಸ್ತ್ರಗಳ ಮೇಲೆ ಅಸ್ತ್ರ ನೀಡುತ್ತಿದ್ದೇವೆ. ಇದು ಪಕ್ಷದ ಸಂಘಟನೆಗೆ ಹಿನ್ನಡೆ ಉಂಟು ಮಾಡಿದೆ ಎಂದು ಅಗರವಾಲ್ ಸಿಡಿಮಿಡಿಗೊಂಡಿದ್ದಾರೆ.
