ಉದಯವಾಹಿನಿ, ಬೆಳಗಾವಿ: ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರು ಹಾಗೂ ಸಚಿವರು ಆಗಿದ್ದ ಮನೋಹರ ಹನುಮಂತಪ್ಪ ತಹಸೀಲ್ದಾರ್ ಸೇರಿದಂತೆ ಇತ್ತೀಚೆಗೆ ಅಗಲಿದ ಏಳು ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚನ ನಿರ್ಣಯವನ್ನು ಪ್ರಸ್ತಾಪಿಸಿ, ವಿಧಾನಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಮನೋಹರ ಹನುಮಂತಪ್ಪ ತಹಸೀಲ್ದಾರ್ , ಮಾಜಿ ಸಚಿವರಾಗಿದ್ದ ಕೆ.ಎಚ್.ಶ್ರೀನಿವಾಸ್, ಮಾಜಿ ಸದಸ್ಯರಾಗಿದ್ದ ಬಸವರಾಜು.ಎ.ಎಸ್, ಲಕ್ಷ್ಮಿನಾರಾಯಣ.ಕೆ, ವೆಂಕಟರೆಡ್ಡಿ ಮುದ್ನಾಳ್ ಹಾಗೂ ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ರತನ್ ಟಾಟಾ, ಸೂಫಿ ಸಂತರಾದ ಸಯ್ಯದ್ ಷಹಾ, ಕುಸ್ರೋ ಉಸೇನಿ ನಿಧನ ಹೊಂದಿರುವುದನ್ನು ನಿದನ ಹೊಂದಿರುವುದನ್ನು ಸದನಕ್ಕೆ ತಿಳಿಸಿದರು.
ಮನೋಹತ್ ತಹಸೀಲ್ದಾರ್ ಅವರು 1946, ಜುಲೈ 21ರಂದು ಹರಿಹರದಲ್ಲಿ ಜನಿಸಿದ್ದರು. 1978ರಲ್ಲಿ ಮೊದಲ ಬಾರಿಗೆ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ನಂತರ 1989, 1999, 2013ರಲ್ಲಿ ವಿಧಾನಸಭೆಗೆ ಪುನರಾಯ್ಕೆಗೊಂಡಿದ್ದರು. 2013ರಲ್ಲಿ ವಿಧಾನಸಭಾ ಉಪಸಭಾಧ್ಯಕ್ಷರಾಗಿ, 2015ರಲ್ಲಿ ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ನ.21ರಂದು ನಿಧನ ಹೊಂದಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವರಾಗಿದ್ದ ಕೆ.ಎಚ್.ಶ್ರೀನಿವಾಸ್ ಅವರು 1938ರಲ್ಲಿ ಸಾಗರ ತಾಲ್ಲೂಕಿನ ಕಾಣಗೋಡು ಗ್ರಾಮದಲ್ಲಿ ಜನಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಶ್ರೀನಿವಾಸ್ ಕೃಷಿಕರಾಗಿ, ವಕೀಲರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಸಾಹಿತ್ಯ ರಚನೆ ಜೊತೆಗೆ ಸಿನಿಮಾದಲ್ಲೂ ಅಭಿನಯಿಸಿದ್ದರು. ಮೊದಲ ಬಾರಿಗೆ ಚುನಾಯಿತರಾಗಿದ್ದ ಅವರು 6 ಹಾಗೂ 8ನೇ ವಿಧಾನಸಭೆಗೆ ಆಯ್ಕೆಗೊಂಡು ವಾರ್ತಾ ಪ್ರಸಾರ ಮತ್ತು ಯುವಜನ ಸೇವೆಗಳ ಮತ್ತು ಇಂಧನ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಅವರು ಅಪ್ರತಿಮ ಸಂಸದೀಯ ಪಟುವಾಗಿದ್ದರು. ಆಗಸ್ಟ್ 30ರಂದು ನಿಧನರಾಗಿದ್ದಾರೆ ಎಂದು ತಿಳಿಸಿದರು.
