ಉದಯವಾಹಿನಿ,ಬೆಳಗಾವಿ: ಬಿಪಿಎಲ್ ಪಡಿತರಚೀಟಿ ಪರಿಷ್ಕರಣೆ ಕುರಿತಂತೆ ಉಂಟಾಗಿರುವ ಗೊಂದಲಗಳ ಬಗ್ಗೆ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್ನಲ್ಲಿಂದು ಜರುಗಿತು. ಸದಸ್ಯರಾದ ಸಿ.ಟಿ.ರವಿ, ಜವ ರಾಯಿಗೌಡ, ಟಿ.ಎ.ಶರವಣ, ಹನುಮಂತಪ್ಪ ನಿರಾಣಿ ಮತ್ತಿ ತರರು ಪ್ರಶ್ನೆ ಕೇಳಿದ್ದರು.
ಜವರಾಯಿಗೌಡ ಅವರು, 40 ಲಕ್ಷ ನಕಲಿ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಸಚಿವರೇ ಹೇಳಿದ್ದಾರೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ನ ಡಿ ಸೋಜಾ ಅವರ ತೆರಿಗೆ ಕಟ್ಟದೇ ಇರುವವರು ಪಡಿತರಚೀಟಿ ಪಡೆದುಕೊಂಡರೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ಹಾಗಾದರೆ ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ. ಇವರನ್ನು ರಕ್ಷಣೆ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರತಿನಿತ್ಯ ಕಾಳ ಸಂತೆಯಲ್ಲಿ ಅಕ್ಕಿಮಾರಾಟವಾಗುತ್ತಿದೆ. ಅಕ್ಕಿ ಯಾರೂ ಕೊಡುತ್ತಾರೆ. ಎಲ್ಲಿಂದ ಹೋಗುತ್ತೆ..? ಇದನ್ನ ನಿಯಂತ್ರಿಸಲು ಸರ್ಕಾರದ ಕ್ರಮ ಏನು ಎಂದು ಪ್ರಶ್ನಿಸಿದರು.
