ಉದಯವಾಹಿನಿ, ಬೆಂಗಳೂರು: ಇಹಲೋಕ ತ್ಯಜಿಸಿರುವ ಕರ್ನಾಟಕದ ಮಾಜಿ ಸಿ.ಎಂ ಎಸ್.ಎಂ. ಕೃಷ್ಣರ ಅಂತಿಮ ದರ್ಶನಕ್ಕೆ ಆಗಮಿಸಿದ ಶಿವರಾಜ್ ಕುಮಾರ್ ವೀರಪ್ಪನ್ ತಮ್ಮ ತಂದೆ ಡಾ. ರಾಜ್ ಕುಮಾರ್ ಅವರನ್ನು ಅಪಹರಣದ ಮಾಡಿದ ಸಂದರ್ಭದಲ್ಲಿ ಎಸ್ ಎಂ ಕೃಷ್ಣ ನಮ್ಮ ಕುಟುಂಬದೊಂದಿಗೆ ನಿಂತು ಧೈರ್ಯ ತುಂಬಿದೆ ಎಂದು ಸ್ಮರಿಸಿದ್ದಾರೆ.ವೀರಪ್ಪನ್ ನನ್ನ ತಂದೆಯನ್ನು ಅಪಹರಿಸಿದಾಗ ಅವರು ನಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದನ್ನು ನಾವು ಎಂದಿಗೂ ಮರೆಯಲಾರೆವು ಎಂದು ಭಾವುಕರಾಗಿ ಹೇಳಿದ್ದಾರೆ. ನಮ್ಮ ಇಡೀ ಕುಟುಂಬದೊಂದಿಗೆ ಕೃಷ್ಣ ಕುಟುಂಬ ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಶಿವಣ್ಣ ಹೇಳಿದ್ದಾರೆ. ಕೃಷ್ಣ ಅವರು ಶಿಸ್ತು ಮತ್ತು ಸಮಯಪ್ರಜ್ಞೆಗೆ ಹೆಸರಾಗಿದ್ದಾರೆ . ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನೋವು ತಂದಿದೆ. ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
