ಉದಯವಾಹಿನಿ, ಬೆಂಗಳೂರು: ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ, ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಹುದ್ದೆಯಲ್ಲಿ ದಶಕಗಳ ಕಾಲ ಯಶಸ್ವಿ ಕಾರ್ಯಭಾರ ಮಾಡಿದ್ದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ನಿಧನರಾಗಿದ್ದಾರೆ. ಅವರಿಗೆ ೯೨ ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪ್ರೇಮ, ಪುತ್ರಿಯರಾದ ಶಾಂಭವಿ, ಮಾಳವಿಕ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬ ಸದಸ್ಯರನ್ನು ಅಗಲಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದು ಹಿರಿಯ ನಾಯಕ ಎಸ್‌ಎಂ ಕೃಷ್ಣ ಅವರು ಇಂದು ಮುಂಜಾನೆ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಕೆಲಕಾಲ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ಗಣ್ಯರು, ಸಾಹಿತಿಗಳು, ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದರು. ಹಿರಿಯ ನಟ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ನಟಿ ರಮ್ಯಾ, ಯುವರಾಜ್ ಕುಮಾರ್, ರಮೇಶ್, ಪ್ರೇಮ್, ರಿಷಬ್ ಶೆಟ್ಟಿ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಅಧಿಕಾರಾವಧಿಯಲ್ಲಿ ಐಟಿ ಕ್ಷೇತ್ರಕ್ಕೆ ನೀಡಿದ ಉತ್ತೇಜನವಾಗಿ ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಇರಿಸಿದ್ದಕ್ಕಾಗಿ ಬೆಂಗಳೂರಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದರು. ಇದರ ಪರಿಣಾಮವಾಗಿ ಬೆಂಗಳೂರು ಭಾರತದ ’ಸಿಲಿಕಾನ್ ವ್ಯಾಲಿ’ ಆಗಿ ಎಂದು ಖ್ಯಾತಿ ಪಡೆಯಲು ಅವರು ಪ್ರಮುಖಪಾತ್ರ ವಹಿಸಿದ್ದರು. ೧೯೩೨ರ ಮೇ ತಿಂಗಳ ೧ ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು ಸುದೀರ್ಘ ಆರೇಳು ದಶಕದ ರಾಜಕಾರಣದ ಅವಧಿಯಲ್ಲಿ ಶಾಸಕರಾಗಿ, ವಿಧಾನಸಭೆ ಅಧ್ಯಕ್ಷರಾಗಿ ಉಪ ಮುಖ್ಯಮಂತ್ರಿಯಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿಯಾಗಿ, ರಾಜ್ಯಸಭೆ ಸದಸ್ಯ, ವಿದೇಶಾಂಗ ಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ೫೦ ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ್ದರು.
