ಉದಯವಾಹಿನಿ, ಮೈಸೂರು: ಮೈಸೂರಿನ ರಾಜವಂಶಸ್ಥರ ಕುಟುಂಬದಲ್ಲಿ ಬುಧವಾರ ಸಂಭ್ರಮದ ದಿನ. ಎರಡು ತಿಂಗಳ ಹಿಂದೆ ದಸರಾದ ಸಂದರ್ಭದಲ್ಲಿಯೇ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಅವರಿಗೆ ಎರಡನೇ ಪುತ್ರ ಜನಿಸಿದ್ದ. ಈಗ ಮನೆಯಲ್ಲಿ ತೊಟ್ಟಿಲು ಶಾಸ್ತ್ರದ ಸಡಗರ. ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ತೊಟ್ಟಿಲು ಶಾಸ್ತ್ರ ಹಾಗೂ ನಾನಾ ಪೂಜೆಗಳು ನೆರವೇರಿದವು.
ಯದುವೀರ್ ಒಡೆಯರ್, ತ್ರಿಷಿಕಾದೇವಿ ಒಡೆಯರ್, ಪ್ರಮೋದಾದೇವಿ ಒಡೆಯರ್, ಆದ್ಯವೀರ್ ಒಡೆಯರ್ ಚಾಮುಂಡಿಬೆಟ್ಟಕ್ಕೆ ಪುಟ್ಟ ಮಗುವಿನೊಂದಿಗೆ ಆಗಮಿಸಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ರಾಜವಂಶಸ್ಥರಿಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಮನೆದೇವರು. ಈ ಕಾರಣದಿಂದ ಇಲ್ಲಿಯೇ ಎಲ್ಲಾ ಪೂಜೆಗಳನ್ನು ಅವರು ನೆರವೇರಿಸುವುದು ವಾಡಿಕೆ. ಅದರಂತೆ ಧಾರ್ಮಿಕ ಚಟುವಟಿಕೆ ವಿಧಿ ವಿಧಾನಗಳು ಸಡಗರದಿಂದಲೇ ನಡೆದವು.
