ಉದಯವಾಹಿನಿ, ಮೂಡಿಗೆರೆ: ತಾಲ್ಲೂಕಿನಲ್ಲಿ ಹೈನುಗಾರಿಕೆಗೆ ವಿಪುಲ ಅವಕಾಶಗಳಿದ್ದರೂ ಸೂಕ್ತ ಉತ್ತೇಜನ ಸಿಗದೇ ಅಂಗೈಯಲ್ಲೇ ಬೆಣ್ಣೆಯಿದ್ದರೂ ತುಪ್ಪ ಮಾಡಿಕೊಳ್ಳಲಾಗದ ಸ್ಥಿತಿ ರೈತರಿಗಾಗಿದೆ. ಮೂಡಿಗೆರೆ ತಾಲ್ಲೂಕಿಗೆ ಹಾಸನದ ಡೈರಿಯಿಂದ ಪ್ರತಿನಿತ್ಯವೂ ಹಾಲು ಪೂರೈಕೆ ಮಾಡಲಾಗುತ್ತದೆ. ಮಲೆನಾಡಿನಲ್ಲಿ ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆಯು ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದು, ಇಂದಿಗೂ ಪಟ್ಟಣದ ಸುತ್ತಮುತ್ತಲಿನಲ್ಲಿಯೇ ಇನ್ನೂರಕ್ಕೂ ಅಧಿಕ ಕುಟುಂಬಗಳು ಹಾಲು ಮಾರಾಟದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಕೊಲಿಬೈಲ್, ಬೀಜುವಳ್ಳಿ, ಕೃಷ್ಣಾಪುರ, ಬಿಳಗುಳ, ಬಿದರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಹೈನುಗಾರಿಕೆ ಜೀವಂತವಾಗಿದ್ದು, ತಾವು ಉತ್ಪಾದಿಸುವ ಹಾಲನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಿದ್ದಾರೆ.
ಪಟ್ಟಣದಲ್ಲಿ ಖಾಸಗಿ ಹಾಲು ಮಾರಾಟಗಾರರು ಗ್ರಾಮೀಣ ಭಾಗದ ರೈತರಿಂದ ಹಾಲು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ಕೇಂದ್ರಗಳನ್ನು ತೆರೆದಿದ್ದು, ಕ್ಷೀರಪಥವಿಲ್ಲದ ಕಾರಣ ಅನಿವಾರ್ಯವಾಗಿ ರೈತರು ಸ್ಥಳೀಯ ವರ್ತಕರಿಗೆ ಲಾಭಾಂಶವಿಲ್ಲದೇ ಹಾಲು ಮಾರುವಂತಹ ಸ್ಥಿತಿ ಬಂದೊದಗಿದೆ. ಆದರೆ, ಕ್ಷೀರಪಥದ ಯೋಜನೆ ಈಡೇರದೆ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯೇ ನಶಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಲು ಮಾರಲಾಗದ ರೈತರು ಹಾಲು ಕೊಡುವ ಹಸುಗಳನ್ನೇ ಬಿಡಾಡಿಯಾಗಿ ಬಿಟ್ಟ ಉದಾಹರಣೆಗಳಿವೆ.
