ಉದಯವಾಹಿನಿ, ಬೆಂಗಳೂರು: ದೂರವಾಣಿ ಕರೆಯಿಂದ ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವ ಪ್ರಧಾನಿ ನರೇಂದ್ರಮೋದಿ ಅವರಿಗೆ ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, ಕೇವಲ ಟಿಕ್‌ಟಾಕ್, ಶೇರ್ ಚಾಟ್‌ನಂತಹ ೫೯ ಚೀನಿ ಆಪ್‌ಗಳನ್ನು ನಿಷೇಧಿಸಲು ಪ್ರಧಾನಿಯವರು ತೀವ್ರ ಆಸಕ್ತಿ ತೋರಿದ್ದರು. ಆದರೆ, ಚೀನಾದಿಂದ ಆಮದಾಗುತ್ತಿರುವ ಸರಕುಗಳ ನಿಷೇಧಕ್ಕೆ ಹಿಂಜರಿಯುತ್ತಿದ್ದಾರೆ ಎಂದು ದೂರಿದೆ.
೨೦೧೩-೧೪ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಚೀನಾದಿಂದ ಭಾರತಕ್ಕೆ ೪.೩೫ ಲಕ್ಷ ಕೋಟಿ ಮೌಲ್ಯದ ಸರಕುಗಳು ಆಮದಾಗಿತ್ತು. ಆದರೆ, ೨೦೨೩-೨೪ರ ಮೋದಿ ಸರ್ಕಾರದಲ್ಲಿ ೮.೬೨ ಲಕ್ಷ ಕೋಟಿ ಮೌಲ್ಯದಷ್ಟು ಸರಕುಗಳು ಆಮದಾಗಿವೆ.
೧೦ ವರ್ಷಗಳ ಅವಧಿಯಲ್ಲಿ ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೌಲ್ಯ ದುಪ್ಪಟ್ಟಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಚೀನಾದಿಂದ ಆಮದಾಗುತ್ತಿರುವ ಸರಕುಗಳಿಂದಾಗಿ ಚನ್ನಪಟ್ಟಣದ ಬೊಂಬೆಗಳಿಗೆ ಹಾಗೂ ಗುಡಿ ಕೈಗಾರಿಕೆಗಳಿಗೆ, ಸ್ವದೇಶಿ ಉತ್ಪಾದನಾ ವಲಯಕ್ಕೆ ಭಾರಿ ಹೊಡೆಯ ಬಿದ್ದಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಗಳು ಹಾಗೂ ಅನೇಕ ಕಾರ್ಖಾನೆಗಳಿಗೆ ಬೀಗ ಬೀಳುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದೆ.
