ಉದಯವಾಹಿನಿ, ಹಾವೇರಿ: ವಿದ್ಯಾನಗರದ ಪಿಡಬ್ಲ್ಯುಡಿ ಕ್ಯಾರ್ಟಸ್ ಕಾಲೊನಿಯಲ್ಲಿರುವ ಆಂಜನೇಯ ಹಾಗೂ ಶನೈಶ್ವರ ದೇವರ ಕಾರ್ತಿಕ ದೀಪೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. ನಗರದ ವಾಲ್ಮೀಕಿ ವೃತ್ತದಲ್ಲಿರುವ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ದೀಪೋತ್ಸವ ನಿಮಿತ್ತ ದೇವಸ್ಥಾನ ಹಾಗೂ ದೇವರ ಮೂರ್ತಿಗಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರು. ಬಾಳೆ ಹಣ್ಣು- ತೆಂಗಿನಕಾಯಿಗಳನ್ನು ನೈವೇದ್ಯ ಹಿಡಿದು ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.ಸಾರ್ವಜನಿಕರಿಗಾಗಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ದೇವರ ದರ್ಶನ ಪಡೆದ ಜನರು, ಸರದಿ ಸಾಲಿನಲ್ಲಿ ನಿಂತು ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು. ಸಂಜೆ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು. ಬಳಿಕ, ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ನಡೆಯಿತು. ಪಿಡಬ್ಲ್ಯುಡಿ ಕ್ಯಾರ್ಟಸ್್ರ ನಿವಾಸಿಗಳು ಹಾಗೂ ಅಕ್ಕ-ಪಕ್ಕದ ಪ್ರದೇಶಗಳ ಜನರು, ದೇವಸ್ಥಾನಕ್ಕೆ ಬಂದು ದೀಪಗಳನ್ನು ಹಚ್ಚಿದರು. ದೇವಸ್ಥಾನದ ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳ ಆಟಿಕೆ ಸಾಮಗ್ರಿಗಳ ಮಾರಾಟವೂ ಜೋರಾಗಿತ್ತು. ದೇವಸ್ಥಾನ ರಸ್ತೆಯಲ್ಲಿಯೂ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
