ಉದಯವಾಹಿನಿ, ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನ ಎರಡು ವಾರಗಳ ಪ್ರವಾಸ ಕಾರ್ಯಕ್ರಮದಂತಾಗಿದೆ. ಅದರ ಹೊರತಾಗಿ ಯಾವ ಪ್ರಯೋಜನಗಳೂ ಆಗುತ್ತಿಲ್ಲ ಎಂದು ಗುರುಮಿಠಕಲ್ ಕ್ಷೇತ್ರ ಶಾಸಕ ಶರಣಗೌಡ ಕಂದಕೂರ ಆರೋಪಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅವರು, ಬೆಳಗಾವಿಯ ಅಧಿವೇಶನ ಎರಡು ವಾರಗಳ ಟೂರಿಂಗ್ ಸಮಾವೇಶವಾಗುತ್ತಿದೆ. ಪ್ರತಿ ಅಧಿವೇಶನಕ್ಕೆ 25 ಕೋಟಿ ರೂಪಾಯಿ ಖರ್ಚಾಗುತ್ತದೆ. ಇಲ್ಲಿ ಚರ್ಚೆಯಾಗುತ್ತದೆ. ನಾನು ಕಳೆದ ಅಧಿವೇಶನದಲ್ಲಿ ಇಲ್ಲಿ ಸಮಸ್ಯೆಗಳ ಬಗ್ಗೆ ಜೋರಾಗಿ ಮಾತನಾಡಿದೆ, ಭಾರೀ ಪ್ರಚಾರವನ್ನು ಪಡೆದುಕೊಂಡೆ ಆದರೆ ಸಮಸ್ಯೆ ಈವರೆಗೂ ಪರಿಹಾರವಾಗಿಲ್ಲ. ಹಾಗಾಗಿ ಚರ್ಚೆಗೆ ಅವಕಾಶ ನೀಡಿದ್ದಕ್ಕಾಗಿ ಸಭಾಧ್ಯಕ್ಷರಿಗೆ ಧನ್ಯವಾದ ಹೇಳುವುದಿಲ್ಲ. ಹಾಗೇಯೇ ಈ ಅಧಿವೇಶನ ಯಾವ ಪುರುಷಾರ್ಥಕ್ಕೆ ನಡೆಸುತ್ತದೆ ಎಂದು ಹೇಳಬೇಕು ಎಂದರು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದೆ. ಸಚಿವ ಭೈರತಿ ಸುರೇಶ್ ಸೇರಿ ಅನೇಕರು ಗುಂಪಾಗಿ ನಿಂತು ಚರ್ಚೆ ಮಾಡುತ್ತಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸರ್ಕಾರ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.
