ಉದಯವಾಹಿನಿ, ಹಿರಿಯೂರು: 3ನೇ ಬಾರಿಗೆ ಕೋಡಿ ಬೀಳುವ ಕ್ಷಣಕ್ಕೆ ವಾಣಿವಿಲಾಸ ಸಾಗರ ಜಲಾಶಯ ಸಾಕ್ಷಿಯಾಗಲು ದಿನಗಣನೆ ಆರಂಭವಾಗಿದೆ. ಕೋಡಿ ಬಿದ್ದು ಹೊರ ಹರಿಯುವ ಜಲಧಾರೆಯನ್ನು ಕಣ್ಮುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಆದರೆ ಜಲಾಶಯದ ಬಳಿ ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಸೇರಿ ಮೂಲ ಸೌಲಭ್ಯ ಒದಗಿಸುವುದೇ ದೊಡ್ಡ ಸವಾಲಾಗಿದೆ. 2022ರ ಸೆ.2ರಂದು ಜಲಾಶಯ ಇತಿಹಾಸದಲ್ಲೇ 2ನೇ ಬಾರಿಗೆ ಕೋಡಿ ಬಿದ್ದಾಗ ಅಪಾರ ಸಂಖ್ಯೆಯ ಜನರು ವೀಕ್ಷಿಸಿದ್ದರು. ಈ ಬಾರಿಯೂ ಲಕ್ಷಾಂತರ ಜನ ಭೇಟಿ ನೀಡುವ ಸಾಧ್ಯತೆ ಇದೆ. ಮಂಗಳವಾರ ನೀರಿನ ಮಟ್ಟ 128.95 ಅಡಿ ದಾಖಲಾಗಿತ್ತು. ಪೂರ್ಣಮಟ್ಟ 130 ಇನ್ನು ಭರ್ತಿಗೆ 1.05 ಅಡಿ ಮಾತ್ರ ಬಾಕಿ ಇದೆ. ಸಂಕ್ರಾಂತಿ ವೇಳೆಗೆ ಕೋಡಿ ಬೀಳುವ ಎಲ್ಲ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಲಾಶಯವ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ. ಕೋಡಿ ಬೀಳುವುದನ್ನು ಕಣ್ಣುಂಬಿಕೊಳ್ಳಲು ಬರುವ ಸಹಸ್ರಾರು ಸಂಖ್ಯೆಯ ಪ್ರವಾಸಿಗರ ವಾಹನಗಳಿಗೆ ಎರಡೂ ಬದಿಯಲ್ಲಿ ನಿಲುಗಡೆ ವ್ಯವಸ್ಥೆ ಮಾಡುವುದೇ ಸವಾಲಾಗಿದೆ. ಕೋಡಿ ಬಿದ್ದಲ್ಲಿ ನೀರು ಹರಿದು ಹೋಗಲು ಮೇಲೇತುವೆ ಇಲ್ಲದ್ದರಿಂದ ನೀರು ರಸ್ತೆಯ ಮೇಲೆ ಹರಿಯುತ್ತದೆ. ಹೀಗಾಗಿ ವಾಣಿವಿಲಾಸಪುರದ ಮೂಲಕ ಹೊಸದುರ್ಗಕ್ಕೆ ಹೋಗುವ ರಸ್ತೆ ಬಂದ್ ಆಗಲಿದೆ.
ಪ್ರವಾಸಿಗರು ರಸ್ತೆ ಬದಿಯಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ಹೋದರೆ ವಾಹನ ಚಾಲಕರ ಪರದಾಟ ಹೇಳತೀರದು. ವಾಹನ ನಿಲುಗಡೆ ಸಮಸ್ಯೆಯನ್ನು ಪರಿಹರಿಸಲು ವಿಶ್ವೇಶ್ವರಯ್ಯ ನೀರಾವರಿ ನಿಗಮ, ಲೋಕೋಪಯೋಗಿ ಅಥವಾ ಪ್ರವಾಸೋದ್ಯಮ ಇಲಾಖೆಯವರು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ. ಪ್ರವಾಸಿಗರಿಗೆ ವಸತಿ ಸಮಸ್ಯೆ ಕಾಡಲಿದೆ. ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಸೇರಿದ ಎರಡು ಪ್ರವಾಸಿ ಮಂದಿರಗಳಿದ್ದು, ಆರೇಳು ಕೊಠಡಿಗಳು ಮಾತ್ರ ಇವೆ. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ವಸತಿ ಗೃಹಗಳನ್ನು ಇನ್ನೂ ನಿರ್ಮಿತಿ ಕೇಂದ್ರದವರು ಹಸ್ತಾಂತರಿಸದ ಕಾರಣಕ್ಕೆ ಐದಾರು ವರ್ಷದಿಂದ ಅವೆಲ್ಲ ಇದ್ದೂ ಇಲ್ಲದಂತಾಗಿವೆ. ಖಾಸಗಿಯವರಿಗೆ ಸೇರಿದ ಒಂದೇ ಒಂದು ವಸತಿ ಗೃಹವಿದ್ದು ಅಲ್ಲೂ ಕೊಠಡಿಗಳ ಕೊರತೆ ಇದೆ.
