ಉದಯವಾಹಿನಿ, ನವದೆಹಲಿ: ಅತ್ಯಂತ ಬಡ ರೈತನ ಮಗನಾದ ನನಗೆ ಈ ದೇಶದ ಸಂವಿಧಾನ ಎಲ್ಲವನ್ನೂ ಕೊಟ್ಟಿದೆ ಎಂದು ರಾಜ್ಯಸಭೆಯಲ್ಲಿ ನಿನ್ನೆ ಭಾವಪೂರ್ಣವಾಗಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂವಿಧಾನದ ಬಲದಿಂದಲೇ ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವಂತೆ ಆಯಿತು ಎಂದರು.
ಸಂವಿಧಾನವನ್ನು ಅಳವಡಿಸಿಕೊಂಡ 75 ವರ್ಷಗಳ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಅವರು, ಸಂವಿಧಾನ ನನಗೆ ಎಲ್ಲವನ್ನೂ ಕೊಟ್ಟಿದೆ. ಒಬ್ಬ ಬಡ ರೈತನ ಮಗನಾಗಿ, ದೂರದ ಹಳ್ಳಿಯಿಂದ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಲು ಸಾಧ್ಯವಾಗಿದ್ದರೆ ಅದು ನಮ ಸಂವಿಧಾನದಿಂದ ಮಾತ್ರ ಎಂದರು.
ಕಳೆದ 75 ವರ್ಷಗಳ ಅವಧಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಭಾರತದ ಬೆಳೆದ ರೀತಿ, ಮಾಡಿದ ಸಾಧನೆಗಳ ಬಗ್ಗೆ ಅನೇಕ ಮಹತ್ವಪೂರ್ಣ ಅಂಶಗಳನ್ನು ಸದನದಲ್ಲಿ ಹಂಚಿಕೊಂಡರು. ಆಧುನಿಕ ಭಾರತವನ್ನು ರೂಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಸಂವಿಧಾನ ಅಸಾಧಾರಣ ಕೊಡುಗೆ ನೀಡಿದೆ. ಬಾಬಾ ಸಾಹೇಬ್ ಅವರ ನೇತೃತ್ವದಲ್ಲಿ ರಚನೆಯಾದ ನಮ ಸಂವಿಧಾನವು ಅನೇಕ ಒತ್ತಡಗಳು ಮತ್ತು ನಮ ಕಾಲದ ರಾಜಕೀಯವನ್ನು ತಡೆದುಕೊಂಡು ನಿಂತಿದೆ ಎಂದು ಅವರು ಹೇಳಿದರು.
