ಉದಯವಾಹಿನಿ, ಗಬ್ಬಾ : ಟೀಮ್ ಇಂಡಿಯಾದ ಲೆಜೆಂಡರಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡ ಬೆನ್ನಲ್ಲೇ ಅನುಭವಿ ಸ್ಪಿನ್ನರ್ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಬಾರ್ಡರ್- ಗಾವ್ಕರ್ ಟೆಸ್ಟ್ ಸರಣಿಯ ಉಳಿದ ಪಂದ್ಯಗಳನ್ನು ಆಡದಿರಲು ನಿರ್ಧರಿಸಿರುವುದರಿಂದ ಅಶ್ವಿನ್ ನಾಳೆ (ಗುರುವಾರ) ಭಾರತಕ್ಕೆ ಮರಳಲಿದ್ದಾರೆ.
`ಭಾರತ ತಂಡದ ಪರ ಇದು ನನ್ನ ಕೊನೆಯ ದಿನವಾಗಿದೆ. ಟೀಮ್ ಇಂಡಿಯಾದ ಜೊತೆಗಿನ ಸುದೀರ್ಘ ಬಾಂಧವ್ಯವನ್ನು ಕಳೆದುಕೊಳ್ಳುತ್ತಿರುವುದಕ್ಕೆ ನನ್ನ ಮನಸ್ಸಿಗೆ ಸ್ವಲ್ಪಮಟ್ಟಿಗಿನ ನೋವಾಗಿದೆ. ಆದರೆ ಕ್ಲಬ್ ಕ್ರಿಕೆಟ್ ನಲ್ಲಿ ನಾನು ಮುಂದುವರೆಯುತ್ತೇನೆ’ ಎಂದು ಅಶ್ವಿನ್ ತಿಳಿಸಿದ್ದಾರೆ.
ಅಶ್ವಿನ್ ದಾಖಲೆಗಳು: *ಆಸ್ಟ್ರೇಲಿಯಾ (115 ವಿಕೆಟ್, 23 ಟೆಸ್ಟ್) ಹಾಗೂ ಇಂಗ್ಲೆಂಡ್ (114 ವಿಕೆಟ್, 24 ಟೆಸ್ಟ್) ವಿರುದ್ಧ 100 ವಿಕೆಟ್ ಗಳ ಸಾಧನೆ. ತಮ 14 ವರ್ಷದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 11 ಬಾರಿ ಸರಣಿ ಶ್ರೇಷ್ಠ.
37 ಬಾರಿ 5 ಬಾರಿ ಟೆಸ್ಟ್ ವಿಕೆಟ್.
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 7ನೇ ಬೌಲರ್. ಮುತ್ತಯ್ಯ ಮುರಳೀಧರನ್ (800) ಅಗ್ರಸ್ಥಾನದಲ್ಲಿದ್ದಾರೆ. ಮುತ್ತಯ್ಯ ಮುರಳೀಧರನ್ (336), ಜೇಮ್ಸೌ ಅಂಡರ್ಸನ್ (320) ನಂತರ ಅತಿ ಹೆಚ್ಚು ಎಲ್ಬಿಡಬ್ಲ್ಯು ಮಾಡಿದ ದಾಖಲೆ ಕೂಡ ರವಿಚಂದ್ರನ್ ಅಶ್ವಿನ್ (302) ಹೆಸರಿನಲ್ಲಿದೆ.
ಐಸಿಸಿ ಟ್ರೋಫಿಗಳಲ್ಲಿ ಅಶ್ವಿನ್ ಮಿಂಚು : ಟೆಸ್ಟ್ ಕ್ರಿಕೆಟ್ನಲ್ಲಿ ಅಪ್ರತಿಮ ಬೌಲರ್ ಆಗಿ ಗುರುತಿಸಿಕೊಂಡಿದ್ದ ಆಶ್ ಭಾರತಕ್ಕೆ ಹಲವು ಐಸಿಸಿ ಆಯೋಜಿತ ಟ್ರೋಫಿಗಳನ್ನು ಗೆದ್ದು ಕೊಡುವಲ್ಲೂ ತಮದೇ ಆದ ಕೊಡುಗೆ ನೀಡಿದ್ದರು.
2011ರಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಜಂಟಿ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ ಏಕದಿನ ವಿಶ್ವಕಪ್ ಕೇವಲ 2 ಪಂದ್ಯಗಳಲ್ಲಿ 4 ವಿಕೆಟ್ ಪಡೆದು ಎಂ.ಎಸ್.ಧೋನಿ ಸಾರಥ್ಯದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲು ಕೊಡುಗೆ ನೀಡಿದ್ದರು.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ರನ್ನರ್ ಅಪ್ ಆದ ಭಾರತ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆದಿದ್ದರು. 2014ರಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ನಲ್ಲಿ ರನ್ನರ್ ಅಪ್, 2019-21 ಹಾಗೂ 2021-23ರ ಡಬ್ಲ್ಯುಟಿಸಿಯಲ್ಲಿ ಭಾರತ ಫೈನಲ್ ಗೆ ತಲುಪಲು ಅಶ್ವಿನ್ ತಮದೇ ಕೊಡುಗೆ ನೀಡಿದ್ದರು. ಆದರೆ ಫೈನಲ್ ಆಡುವ ಅವಕಾಶ ಅಶ್ವಿನ್ ಗೆ ಸಿಕ್ಕಿಲ್ಲ. 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2010 ಹಾಗೂ 2016ರಲ್ಲಿ ನಡೆದಿದ್ದ ಐಸಿಸಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಅಶ್ವಿನ್ ಪಾತ್ರ ಅಪಾರವಾಗಿದೆ.
ವೇಗದ 500 ವಿಕೆಟ್ ಸ್ವದೇಶಿ ಪಿಚ್ ಗಳಲ್ಲಿ ಭಾರತ ಪರ ಮೊದಲ ಆದ್ಯತೆಯ ಸ್ಪಿನ್ನರ್ ಆಗಿದ್ದ ರವಿಚಂದ್ರನ್ ಅಶ್ವಿನ್ ಅವರು ಹಲವು ಅವಿಸರಣೀಯ ದಾಖಲೆಗೆ ಭಾಜನರಾಗಿದ್ದಾರೆ. ಭಾರತ ತಂಡದ ಪರ ಕನ್ನಡಿಗ ಅನಿಲ್ ಕುಂಬ್ಳೆ (617) ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಆಗಿರುವ ಆರ್. ಅಶ್ವಿನ್ ಅತಿ ವೇಗದ 250, 300, 350, 400, 450 ಹಾಗೂ 500 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.
