ಉದಯವಾಹಿನಿ, ಚಿಕ್ಕಮಗಳೂರು: ಮಲೆನಾಡು ಭಾಗದ ಐದು ತಾಲ್ಲೂಕುಗಳ 1,500ಕ್ಕೂ ಹೆಚ್ಚು ಜನವಸತಿಗಳಿಗೆ ತುಂಗಾ, ಭದ್ರಾ, ಹೇಮಾವತಿ ನದಿಗಳಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಹರಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆ ಸಿದ್ಧಪಡಿಸಿದೆ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಒಟ್ಟು 1,537 ಜನವಸತಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಪಟ್ಟಣಗಳಿಗೂ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಒಟ್ಟಾರೆ ₹918.95 ಕೋಟಿ ಮೊತ್ತದ ಯೋಜನೆಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯಬೇಕಿದೆ.

ಎರಡೂ ಸರ್ಕಾರಕ್ಕೆ ಸ್ಥಳೀಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಶೃಂಗೇರಿ ಪಟ್ಟಣ ಮತ್ತು ತಾಲ್ಲೂಕಿನ ಬಂಡಿಗಾಡಿ, ಚಾವಲಮನೆ, ಹರಿಹರಪುರ ಸುತ್ತಮುತ್ತಲ 694 ಜನವಸತಿಗೆ ಮತ್ತು ಕೊಪ್ಪ ತಾಲ್ಲೂಕಿನ 514 ಜನವಸತಿಗಳಿಗೆ ತುಂಗಾ ನದಿಯಿಂದ ಪೂರೈಸಲು ₹500 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಎನ್.ಆರ್.ಪುರ ತಾಲ್ಲೂಕಿನ ಬನ್ನೂರು, ಬಿ.ಕನಬೂರು, ಮಾಗುಂದಿ ಸೇರಿ 73 ಜನವಸತಿಗೆ ಭದ್ರಾ ನದಿಯಿಂದ ನೀರು ಪೂರೈಸಲು ಮತ್ತೊಂದು ಯೋಜನೆ ಸಿದ್ಧವಾಗಿದೆ. ಈ ಯೋಜನೆಗೆ ₹135.95 ಕೋಟಿ ಮೊತ್ತವನ್ನು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!