ಉದಯವಾಹಿನಿ, ಬೆಂಗಳೂರು: ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಳ ಮಾಡುವಂತೆ ರೈತರು ಬೇಡಿಕೆ ಇಟ್ಟಿದ್ದು, ಸಂಕ್ರಾಂತಿ ಬಳಿಕ ಈ ಸಂಬಂಧ ಸಭೆ ನಡೆಸಿ ದರ ಏರಿಕೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಪ್ರಸ್ತಾವನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆನಡೆಸಲಾಗಿದೆ. ಆದರೆ ಇನ್ನೂ ದರ ಏರಿಕೆ ಬಗ್ಗೆ ನಿರ್ಧಾರವಾಗಿಲ್ಲ. ಸಂಕ್ರಾಂತಿ ಹಬ್ಬದ ನಂತರ ಮತ್ತೊಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಹಿಂದೆ 50 ಎಂಎಲ್ ಹಾಲನ್ನು ನೀಡುವ ಮೂಲಕ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿತ್ತು. ಹೆಚ್ಚುವರಿ ಹಾಲನ್ನು ವಾಪಸ್ ಪಡೆಯಲು ಉದ್ದೇಶಿಸಲಾಗಿದೆ. ಹಾಲಿನ ದರ ಹೆಚ್ಚಳ ಕುರಿತಂತೆ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚೆಯಾಗಿದ್ದು, ಹೆಚ್ಚಳ ಮಾಡುವಂತೆ ಪ್ರಸ್ತಾಪವೂ ಆಗಿದೆ ಎಂದರು.
ಅಯೋಧ್ಯೆಯಲ್ಲೂ ನಂದಿನಿ ತುಪ್ಪ: ಅಯೋಧ್ಯೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ನಮ ನಂದಿನಿ ತುಪ್ಪ ಕಳೆದ ಹತ್ತು ವರ್ಷಗಳಿಂದ ಬಳಕೆಯಾಗುತ್ತಿದೆ. ತಿರುಪತಿ ಲಡ್ಡು ವಿವಾದದ ನಂತರ ನಂದಿನಿ ತುಪ್ಪಕ್ಕೆ ಶೇ.10ರಿಂದ 15ರಷ್ಟು ಮಾರಾಟ ಹೆಚ್ಚಳವಾಗಿದೆ.ಶಿರಡಿಯಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಶಿರಡಿಗೂ ತುಪ್ಪ ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದರು. ಆರ್‌ಸಿಬಿ ಪ್ರಾಯೋಜಕತ್ವ: ಕೆಎಂಎಫ್‌ನ ಬಜೆಟ್‌ಗೆ ಆರ್‌ಸಿಬಿಯವರು ಒಪ್ಪಿಕೊಂಡರೆ ಮುಂದಿನ ಐಪಿಎಲ್‌ನಲ್ಲಿ ಪ್ರಾಯೋಜಕತ್ವ ಮಾಡಲಾಗುವುದು. ಈ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಾಗುವುದು ಎಂದು ಭೀಮಾನಾಯಕ್ ಹೇಳಿದರು.
