ಉದಯವಾಹಿನಿ, ಉಡುಪಿ: ಜಮ್ಮು ಮತ್ತು ಕಾಶ್ಮೀರದ ಪೂಂಟ್ ಜಿಲ್ಲೆಯಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿರುವ ಕುಂದಾಪುರ ತಾಲ್ಲೂಕಿನ ಯೋಧ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಬೀಜಾಡಿಗೆ ಗುರುವಾರ ತರಲಾಯಿತು. ಅನೂಪ್ ಅವರ ಅಂತಿಮ ದರ್ಶನಕ್ಕಾಗಿ ಸಾವಿರಾರು ಮಂದಿ ಬೀಜಾಡಿಯಲ್ಲಿ ಸೇರಿದ್ದರು. ಮೃತದೇಹವನ್ನು ಮನೆಗೆ ತಂದಾಗ ಬಂಧುಗಳ ರೋಧನ ಮುಗಿಲು, ಮುಟ್ಟಿತ್ತು.
ಸೇರಿದ್ದ ಜನರು ಭಾರತ್ ಮಾತಾ ಕಿ ಜೈ, ಅನೂಪ್ ಪೂಜಾರಿ ಅಮರ್ ರಹೇ ಘೋಷಣೆಗಳನ್ನು ಕೂಗಿದರು.ಅಗಲಿದ ಯೋಧನಿಗೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವ ಸಲ್ಲಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಸಿದ್ದಲಿಂಗಪ್ಪ ಮೊದಲಾದವರು ಅಂತಿಮ ದರ್ಶನ ಪಡೆದರು.ಬಳಿಕ ಪಾರ್ಥಿವ ಶರೀರವನ್ನು ಬೀಜಾಡಿ ಪಡುವಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕಿರಿಸಲಾಯಿತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
