ಉದಯವಾಹಿನಿ, ಕೆಂಗೇರಿ: ಕರ್ನಾಟಕ ರಾಜ್ಯ ರೈತ ಸಂಘ ಕಗ್ಗಲೀಪುರ ವೃತ್ತದ ರೈತಸಂಘದಿಂದ ಉಪವಾಸ ಸತ್ಯಾಗ್ರಹವನ್ನು ಕನಕಪುರ ಮುಖ್ಯ ರಸ್ತೆಯ ಟೋಲ್ ಬಳಿ ಹಮ್ಮಿಕೊಂಡಿದ್ದರು.ಆರು ತಿಂಗಳ ಹಿಂದೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ರೈತ ಸಂಘವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪ್ರಸ್ತುತ ನಿರ್ಮಾಣವಾಗುತ್ತಿರುವ ಟೋಲ್ ಸ್ಥಳವು ನಾಲ್ಕು ಪಂಚಾಯತಿಯ ನೂರಾರು ಗ್ರಾಮದ ಗ್ರಾಮಸ್ಥರು ನಿತ್ಯ ಹಲವಾರು ಬಾರಿ, ಆಸ್ಪತ್ರೆ, ಶಾಲೆ, ವಾಣಿಜ್ಯ ಉದ್ದೇಶ , ಹೊಲ ಗದ್ದೆಗಳಿಗೆ ಹಲವಾರು ಬಾರಿ ಸಂಚರಿಸುವ ಕೇಂದ್ರ ಸ್ಥಳವಾಗಿದ್ದು , ಕೆಲವೇ ಮೀಟರ್ ಗಳ ಅಂತರದ ಸಂಚಾರಕ್ಕೂ ಟೋಲ್ ಕಟ್ಟುವ ಪರಿಸ್ಥಿತಿ ಉಂಟಾಗಿದ್ದು ಟೋಲ್ ಕೇಂದ್ರ ವನ್ನು ವರ್ಗಾಹಿಸಿ ಅಥವಾ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷರು ನದೀಂ ಪಾಷ ಮಾತನಾಡಿ ರೈತರನ್ನು , ಬಡವರನ್ನು ಶ್ರಮಿಕರನ್ನು ನಿತ್ಯ ಸುಲಿಗೆ ಮಾಡುವ ಉದ್ದೇಶದಿಂದಲೇ ಹೆದ್ದಾರಿ ಸಂಖ್ಯೆಯನ್ನು ಬದಲಿಸಿದ್ದಾರೆ. ಕಾನೂನನ್ನು ಇಷ್ಟ ಬಂದಂತೆ ಮಾರ್ಪಾಡು ಮಾಡಿ ಜನರನ್ನು ದೋಚುವುದು ನ್ಯಾಯವೇ ರೈತರ , ಹಾಗೂ ಮತ ಹಾಕಿದ ಜನರ ಹಿತ ಕಾಯದ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
