ಉದಯವಾಹಿನಿ, ಸುರಪುರ: ಕಳೆದ ಕೆಲ ದಿನಗಳಿಂದ ನಗರದಲ್ಲಿ ಕಡಲೆಗಿಡದ ವ್ಯಾಪಾರ ಜೋರು ಪಡೆದುಕೊಂಡಿದೆ. ಕೆಲವರು ಇದಕ್ಕೆ ಕಡಲೆಕಾಯಿ, ಹಸಿ ಕಡಲೆ ಗಿಡ ಎಂತಲೂ ಕರೆಯುತ್ತಾರೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಕಡಲೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಡಲೆಕಾಯಿಯನ್ನು ಒಣಗಿಸಿ ಕಡಲೆ ಬೇಳೆ ಮಾರುವುದಕ್ಕಿಂತ ಹಸಿ ಕಡಲೆ ಮಾರಾಟದಲ್ಲೇ ರೈತರು ಹೆಚ್ಚು ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ವ್ಯಾಪಾರ ಸಗಟು ವ್ಯಾಪಾರಿಗಳ ಜೊತೆಗೆ ಬೀದಿಬದಿ ವ್ಯಾಪಾರಿಗಳ ಜೇಬು ತುಂಬಿಸುತ್ತಿದೆ. ಸಗಟು ಮಾರಾಟಗಾರರು ಎಕರೆಗೆ ಇಂತಿಷ್ಟು ಎಂದು ಜಮೀನು ಮಾಲಿಕರ ಹತ್ತಿರ ಗುತ್ತಿಗೆ ಮುಗಿಸುತ್ತಾರೆ. ದಿನಾಲೂ ಸಂಜೆಯಿಂದ ರಾತ್ರಿವರೆಗೂ ಕಡಲೆ ಗಿಡ ಹರಿಯುತ್ತಾರೆ. ಬೆಳಿಗ್ಗೆ ವಾಹನದಲ್ಲಿ ನಗರಕ್ಕೆ ತರುತ್ತಾರೆ. ದಿನಾಲೂ ಎರಡು ವಾಹನಗಳಲ್ಲಿ (ಅಂದಾಜು 3 ರಿಂದ 4 ಟನ್ ಕಡಲೆಗಿಡ ತರುತ್ತಾರೆ). ಬೆಳಿಗ್ಗೆ 7 ಗಂಟೆಯೊಳಗೆ ಬೀದಿಬದಿ ವ್ಯಾಪಾರಿಗಳ ದಂಡು ಸೇರಿರುತ್ತದೆ.
ತಮಗೆ ಬೇಕಾದಷ್ಟು ತೆಗೆದುಕೊಂಡು ಎಂಟು ಗಂಟೆಯೊಳಗೆ ವ್ಯಾಪಾರ ಶುರುವಿಟ್ಟುಕೊಳ್ಳುತ್ತಾರೆ. ಕೆಲವರು ತಲೆ ಮೇಲೆ ಹೊತ್ತು ಮನೆ ಮನೆಗೆ ಮಾರಾಟ ಮಾಡುತ್ತಾರೆ. ಕೆಲವರು ಬಸ್‌ಗಳ ಕಿಟಕಿ ಹತ್ತಿರ ಬಂದು ಪ್ರಯಾಣಿಕರಿಗೆ ಮಾರುತ್ತಾರೆ. ಸಂಜೆಗೆ ಹಣವನ್ನು ಸಗಟು ವ್ಯಾಪಾರಿಗಳಿಗೆ ನೀಡುತ್ತಾರೆ. ಡಿಸೆಂಬರ್, ಜನವರಿ ತಿಂಗಳಲ್ಲಿ ಈ ವ್ಯಾಪಾರ ಜೋರಾಗಿರುತ್ತದೆ. ಸಗಟು ವರ್ತಕರು 5 ರಿಂದ 60 ದೊಟ್ಟ ಗಂಟುಗಳನ್ನು ಮಾಡಿ ವಾಹನದಲ್ಲಿ ತುಂಬಿರುತ್ತಾರೆ. ದಿನಾಲೂ 100 ರಿಂದ 120 ದೊಡ್ಡ ಗಂಟುಗಳು ಬರುತ್ತವೆ. ಬೀದಿಬದಿ ವ್ಯಾಪಾರಿಗಳು ದೊಡ್ಡ ಗಂಟಿಗೆ ಇಷ್ಟು ಎಂದು ದರ ನಿಗದಿ ಮಾಡಿ ಖರೀದಿಸುತ್ತಾರೆ.
