ಉದಯವಾಹಿನಿ, ಬೆಂಗಳೂರು : ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. ೩೧ ರಿಂದ ಮುಷ್ಕರ ನಡೆಸಲು ಮುಂದಾಗಿರುವಾಗಲೇಮುಷ್ಕರವನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಸಾರಿಗೆ ಇಲಾಖೆ ನಡೆಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಭೆ ನಡೆಸಲಿದ್ದು, ಈ ಸಭೆಯ ನಂತರ ಸಾರಿಗೆ ನೌಕರರು ಮುಷ್ಕರಕ್ಕಿಳಿಯುತ್ತಾರೆಯೇ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
ವೇತನ ಹೆಚ್ಚಳಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ೪ ನಿಗಮಗಳ ನೌಕರರ ಸಂಘಟನೆಗಳು ಡಿ. ೩೧ ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಈ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಅವರು ನಿನ್ನೆ ೪ ನಿಗಮಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನೌಕರರ ಬೇಡಿಕೆಗಳ ಈಡೇರಿಕೆ ಹಾಗೂ ನಿಗಮದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು.
ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಮುಷ್ಕರವನ್ನು ಹಿಂಪಡೆಯುವಂತೆ ನೌಕರರಸಂಘಟನೆಗಳಿಗೆ ಸಚಿವ ರಾಮಲಿಂಗಾರೆಡ್ಡಿ ಈಗಾಗಲೇ ಮನವಿ ಮಾಡಿದ್ದಾರೆ.
ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರದಿಂದ ನೆರವು ಪಡೆಯುವ ಬಗ್ಗೆಯೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಇಂದು ಸಭೆ ನಡೆಸಲಿದ್ದು, ಸಭೆಯ ನಂತರ ಸಾರಿಗೆ ನೌಕರರ ಮುಷ್ಕರ ನಡೆಯುತ್ತದೆಯೇ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
