ಉದಯವಾಹಿನಿ, ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕಖರ್ಗೆ ಆಪ್ತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜಾತ್ಯಾತೀತ ಜನತಾದಳ ಪಕ್ಷ ಆರೋಪಿಸಿ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಗುತ್ತಿಗೆದಾರ ಸಚಿನ್ ಪಾಂಚಾಳ್ ಟೆಂಡರ್ ವಂಚನೆ ಮಾಡಿರುವ ಬಗ್ಗೆ ಸಚಿವ ಪ್ರಿಯಾಂಕಖರ್ಗೆ ಆಪ್ತ ರಾಜುಕಪನೂರ್ ೧೫ ಲಕ್ಷ ರೂ. ಲಂಚ ಪಡೆದು ಹತ್ಯೆಯ ಬೆದರಿಕೆ ಹಾಕಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕ್ಲೀನ್‌ಚಿಟ್ ಸರ್ಕಾರ ಸಚಿವರ ಆಪ್ತನನ್ನು ಬಂಧಿಸಿ ತನಿಖೆ ನಡೆಸುವ ಬದಲು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಪ್ರಿಯಾಂಕಖರ್ಗೆ ಬೆನ್ನಿಗೆ ನಿಂತಿದೆ ಎಂದು ಕಿಡಿಕಾರಿದೆ.
ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಪಾತ್ರದ ಬಗ್ಗೆಯೂ ಸರ್ಕಾರ ನಿಷ್ಪಕ್ಷಪಾತ್ರವಾಗಿ ತನಿಖೆ ನಡೆಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
