ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ಚಿನ್ನ ವಂಚನೆ ಮಾಡಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಐಶ್ವರ್ಯಗೌಡ ಮತ್ತು ಆಕೆಯ ಪತಿ ಹರೀಶ್ ಅವರ ವಿರುದ್ಧ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
ರಿಯಲ್ ಎಸ್ಟೇಟ್ ಉದ್ಯೋಗಿ ಸೋನು ಲಮಾಣಿ ತಮಗೆ 5 ಕೋಟಿ ರೂ. ವಂಚನೆಯಾಗಿದೆ ಎಂದು ಆರೋಪಿಸಿದ್ದು ದೂರು ನೀಡಲು ಮುಂದಾಗಿದ್ದರೆ, ಮತ್ತೊಬ್ಬ ಕಾಂಗ್ರೆಸ್ ನಾಯಕರ ಸಂಬಂಧಿಯಿಂದ ಹಣ ಕೀಳುವ ಪ್ರಯತ್ನ ನಡೆದಿರುವ ಆಡಿಯೋ ಸೋರಿಕೆಯಾಗಿದೆ.
ಸೋನು ಲಮಾಣಿ ವಿಡಿಯೋ ಮೂಲಕ ತಮಗಾದ ವಂಚನೆಯನ್ನು ಹೇಳಿಕೊಂಡಿದ್ದು, ಐಶ್ವರ್ಯ ಗೌಡ ತನ್ನನ್ನು ತಾನು ವ್ಯಾಪಾರಸ್ಥರು ಎಂದು ಪರಿಚಯಿಸಿಕೊಂಡಿದ್ದರು. ನನ್ನ 15-16 ನಿವೇಶನಗಳನ್ನು ಮಾರಾಟ ಮಾಡಿಸಿಕೊಟ್ಟಿದ್ದರು. ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡಿದ್ದರು. ತಗಾದೆ ಇರುವ ಆಸ್ತಿಗಳನ್ನು ಮಾರಿಸಿಕೊಡುತ್ತೇನೆ ಎಂದು ನಂಬಿಸಿದ್ದರು. ಹೀಗಾಗಿ ಅವರ ಮತ್ತು ನಮ ನಡುವೆ ಕೊಡು-ಕೊಳ್ಳುವಿಕೆಯ ವ್ಯವಹಾರ ನಡೆದಿತ್ತು ಎಂದು ತಿಳಿಸಿದ್ದಾರೆ.
